ಶರಣ ಇರ್ಷಾದ್

 ಶರಣ ಇರ್ಷಾದ್


ಇವತ್ತಿನ ಅಂತರ್ಜಾಲ ಪ್ರವಚನಗೋಷ್ಠಿಯ ನಂತರ, ದೇವಸ್ಥಾನಕ್ಕೆ ಹೊರಟು ಲಿಫ್ಟ್ ಏರಿದ ಹೊತ್ತು, ನಮ್ಮ ಬಿಲ್ಡಿಂಗ್ ಕೇರ್ ಟೇಕರ್ ಇರ್ಷಾದ್ ಸಿಕ್ಕ. ಇರ್ಷಾದ್ ಧಾರವಾಡದವನು. ಬಹಳ ಚೆನ್ನಾಗಿ ಉತ್ತರ ಕರ್ನಾಟಕದ ಕನ್ನಡ ಭಾಷೆಯನ್ನು ಮಾತನಾಡುತ್ತಾನೆ. ನನಗೆ ಬಹಳ ವರ್ಷಗಳಿಂದಲೂ ಒಂದು ಅಭ್ಯಾಸ ಅಂಟಿದೆ. ವಾರಕ್ಕೊಮ್ಮೆಯಾದರೂ ಮಂಡಕ್ಕಿ ಒಗ್ಗರಣೆ (ಉಸ್ಲಿ, ಸೂಸ) ತಿನ್ನಬೇಕು ಹಾಗೂ ಏಳು ದಿನಗಳಲ್ಲಿ ಒಂದು ಸಲವಾದರೂ ಅರ್ಧ ತಾಸಿನ ಸಮಯವಾದರೂ,  ಉತ್ತರ ಕರ್ನಾಟಕದ ಕನ್ನಡವನ್ನು, ಮನದುಂಬಿ ಕೇಳಿಸಿಕೊಳ್ಳಬೇಕು. ಮಂಡಕ್ಕಿ ಒಗ್ಗರಣೆ ನನ್ನ ಬಾಲ್ಯದ ದಿನಗಳನ್ನು ನೆನಪನ್ನು ತಾಜಾ ಮಾಡಿದರೆ, ಉತ್ತರ ಕರ್ನಾಟಕದ ಕನ್ನಡ ಭಾಷೆ, ನಾನು ಜೋಲಿಯಲ್ಲಿದ್ದಾಗ ಕೇಳುತ್ತಿದ್ದ ಕನ್ನಡದ ಜೋಗುಳ ಪದಗಳ ಅವರ್ಚನೀಯ ಆನಂದವನ್ನು ನೆನಪಿಗೆ ತರುತ್ತದೆ. ನನ್ನ ಅಜ್ಜಿ (ತಾಯಿಯ ಅಮ್ಮ) ಉತ್ತರ ಕರ್ನಾಟಕದವರು. ಎಳವೆಯಿಂದ ನನ್ನ ಆರೈಕೆ ಮಾಡಿದ ಅವರು ಆಡುತ್ತಿದ್ದ ಕನ್ನಡ ಭಾಷೆ ಇಂದು ನನ್ನ ನಾಲಗೆಯಲ್ಲಿ ನಿಂತು ನಲಿದಾಡುತ್ತಿಲ್ಲವಾದರೂ, ಅದು ನನ್ನ ಹೃದಯಾರವಿಂದದಲ್ಲಿ ಸ್ಥಿರಸ್ಥಾಯಿ ರೂಪದಲ್ಲಿ ನೆಲೆ ನಿಂತಿದೆ.


"ಏನ್ ಸಾರ್, ದೇವಸ್ಥಾನಕ್ಕೆ ಹೋಗುತ್ತಿದ್ದೀರಾ? ಇಂದು ಆಷಾಢಮಾಸದ ದಿನ ಅಲ್ಲವೇನ್ರಿ?" ಎಂದು ನನ್ನ ಆಲೋಚನೆಗಳಿಂದ,  ನನ್ನನ್ನು ವಾಸ್ತವ ಜಗತ್ತಿಗೆ ಎಳೆದು ತಂದ ಇರ್ಷಾದ್ ಮಾತಿಗೆ ನಾನು ಸ್ವಲ್ಪ ತಡಬಡಿಸುತ್ತಲೇ, ಅನೈಚ್ಛಿಕವಾಗಿಯೇ,  "ಹೌದು" ಅಂದೆ. ಇರ್ಷಾದ್ ಮುಸ್ಲಿಂ ಆದರೂ, ತಾನು ಹುಟ್ಟಿದ ಧಾರವಾಡದ ಮಣ್ಣಿನ ಗುಣ ಮತ್ತು ತಾನು ಬಾಲ್ಯಕಾಲದಲ್ಲಿ ಬೆಳೆದ ಮೂರು ಸಾವಿರ ಮಠದ ಪರಿಸರದ ಕಾರಣ, ಅನೇಕ ಶರಣಗುಣಗಳನ್ನು ತನ್ನೊಳಗೆ ಅವಿತಿಟ್ಟುಕೊಂಡಿದ್ದಾನೆ. ಇದರಲ್ಲಿ ನನಗೆ ಒಡೆದು ತೋರುವುದು ಆತನ ಕಾಯಕಪ್ರಜ್ಞೆ. ಇದರ ಬಗ್ಗೆಯೇ ಒಂದು ವಿವರವಾದ ಲೇಖನವನ್ನು ಮುಂದೆ ಎಂದಾದರೂ ಒಂದು ದಿನ ಬರೆಯುತ್ತೇನೆ. ಧಾರವಾಡದ ಮಣ್ಣಿಗೆ ಅಂತಹ ಒಂದು ಗುಣವಿಶೇಷತೆ ಇದೆ. "ಧಾರವಾಡದಲ್ಲಿ ಎಲ್ಲಿಯೇ ನಿಂತು, ನೀವು ಒಂದು ಕಲ್ಲು ಎಸೆದರೆ ಅದು ಕವಿಗೋ, ಎಮ್ಮೆಗೋ ತಾಗುತ್ತದೆ" ಎನ್ನುವ ನಾಡಿನ ಜನಜನಿತ ಮಾತಿನ ಜೊತೆಗೆ, ಶರಣರನ್ನೂ ಸೇರಿಸಿಕೊಳ್ಳುವುದು ಸೂಕ್ತ ಎನ್ನುವುದು ನನ್ನ ಭಾವನೆ.


ಲಿಫ್ಟಿನಿಂದ ಕೆಳಗೆ ಇಳಿಯುವಷ್ಟು ವೇಳೆಯಲ್ಲಿ, ಹೋದ ವಾರ ಎಮರ್ಜೆನ್ಸಿಯ ಕಾರಣ ಕೊಟ್ಟು,  ಧಾರವಾಡಕ್ಕೆ ಹೋಗಿ ಬಂದ ಇರ್ಷಾದನನ್ನು "ಮನೆಯಲ್ಲಿ ಎಲ್ಲರೂ ಕ್ಷೇಮ ತಾನೇ? ಏನು ಅಷ್ಟೊಂದು ಅರ್ಜೆಂಟಾಗಿ ಊರಿಗೆ ಹೋಗಿದ್ದು?" ಎಂದು ವಿಚಾರಿಸಿದೆ. "ಎಲ್ಲರೂ ಕ್ಷೇಮ ಸರ್, ಹೀಗೆಯೇ ಮನೆಯಲ್ಲಿ ಒಂದು ಅರ್ಜೆಂಟ್ ಕೆಲಸ ಇತ್ತು. ಹಾಗಾಗಿ ಹೋಗಿದ್ದೆ. ನೀವು ದೇವಸ್ಥಾನಕ್ಕೆ ಹೋಗುತ್ತಿದ್ದೀರಿ, ನಿಮ್ಮನ್ನು ನನ್ನ ಮನೆಯ ಕಥೆ ಹೇಳುತ್ತಾ ಬೋರ್ ಮಾಡಲಿಕ್ಕೆ ಮನಸ್ಸಿಲ್ಲ. ಅದರ ಬಗ್ಗೆ ನಿಮ್ಮ ಬಳಿ ಸಾವಕಾಶವಾಗಿ ಮತ್ತೊಮ್ಮೆ ಹಂಚಿಕೊಳ್ಳುತ್ತೇನೆ" ಎಂದ. "ಸರ್, ನಾವು ಇರುವುದು 'ಕರ್ತಾರನ ಕಮ್ಮಟದಲ್ಲಿ'. ಹಾಗಾಗಿ ನೋವುಗಳು ಯಾರನ್ನು ಬಿಟ್ಟಾವು? ನೀವೇ ಹೇಳಿ" ಎಂದು ಇರ್ಷಾದ್ ನುಡಿದಾಗ, ಅಣ್ಣನವರ ಅದ್ಭುತ ವಚನದ ಸಾಲು ಅಷ್ಟು ಸಹಜವಾಗಿ ಆತನ ಬಾಯಿಂದ ಹೊರಬಿದ್ದಿದ್ದು ನೋಡಿ ನನಗೆ ಆಶ್ಚರ್ಯವಾಯಿತು. ಮುಸ್ಲಿಂನಾದರೂ ಇರ್ಷಾದನ ಶರಣಜ್ಞಾನವನ್ನು ನೋಡಿ ಪುಳಕಿತಗೊಂಡವನು, "ಯಾಕೆ ಸಾಹೇಬ್ರೇ? ನಿಮ್ಮ ಮನೆಯಲ್ಲಿ ಅಂತಹಾ ನೋವಿನ ಘಟನೆ ಏನು ನಡೆಯಿತು?" ಎಂದು ಆತನನ್ನು ಮರುಪ್ರಶ್ನಿಸಿದೆ. 


"ಸಾರ್, ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದೊಡೆಂತಯ್ಯಾ" ಎನ್ನುವ ಅಕ್ಕನ ಬಹು ಜನಪ್ರಿಯ ವಚನದ ಒಂದು ಸಾಲನ್ನು ಉದ್ಗರಿಸಿದವನು, "ಮಿಥ್ಯಾರೋಪಗಳು ಜೀವನದಲ್ಲಿ ಬಂದೇ ಬರುತ್ತವೆ ಸರ್, ಅವುಗಳಿಗೆ ಹೆದರಿಕೊಂಡರೆ ಜೀವನ ಸಾಗಿಸಲು ಆಗುವುದಿಲ್ಲ ನೋಡಿ" ಎಂದೂ ಸೇರಿಸಿದ. ಎಲಾ ಇವನ, ಶರಣತತ್ವಗಳನ್ನು ಎಷ್ಟು ಸಲೀಸಾಗಿ ಈತ ತನ್ನೊಳಗೆ ಸೇರಿಸಿಕೊಂಡಿದ್ದಾನೆ, ಅಲ್ಲವೇ? ಎಂದು ಇರ್ಷಾದ್ ಬಗ್ಗೆ ಒಂದೇ ಕ್ಷಣದಲ್ಲಿ ಹೆಮ್ಮೆಯೂ, ಮರುಕ್ಷಣದಲ್ಲಿ ಈರ್ಷ್ಯೆಯೂ ಉಂಟಾಯಿತು. ಹೆಮ್ಮೆಗೆ ಕಾರಣ, ಮುಸ್ಲಿಂನಾದರೂ, ವಚನಗಳನ್ನು ಹೃದ್ಗತ ಮಾಡಿಕೊಂಡಿರುವ ಇರ್ಷಾದ್ ಕುರಿತಾದದ್ದು. ನನ್ನ ಈರ್ಷ್ಯೆಗೆ ಕಾರಣ, ಲಿಂಗಾಯತನಾಗಿ ಹುಟ್ಟಿ, ವಚನಗಳನ್ನು ಕಳೆದ ಒಂದು ದಶಕದಲ್ಲಿ ಗಂಭೀರತೆಯಿಂದ ಅಧ್ಯಯನ ಮಾಡುತ್ತಿದ್ದರೂ, ವಚನಗಳನ್ನು ಇರ್ಷಾದ್ ನಂತೆ, ನನ್ನ ಜೀವನದ ಸನ್ನಿವೇಶಗಳಿಗೆ ಸೂಕ್ತ ರೀತಿಯಲ್ಲಿ ತಾಳೆ ಹಾಕುವುದರಲ್ಲಿ ನಾನು ಸೋತಿರುವ ವಿಷಾದನೀಯ ಸಂಗತಿ ನೆನಪಾದ ಕಾರಣ.


ಇರ್ಷಾದ್ ಬಗೆಗಿನ ಹೆಮ್ಮೆಯನ್ನು ಮನಸ್ಸಿನಲ್ಲಿ ಹುದುಗಿಡಲಾಗದ ನಾನು, "ಇರ್ಷಾದ್ ನಿನ್ನ ವಚನಗಳ ತಿಳುವಳಿಕೆ ಎಷ್ಟು ಅದ್ಭುತವಾಗಿದೆಯಲ್ಲಾ, ಹೇಗೆ ಇದನ್ನು ಇಷ್ಟು ಸಹಜ ರೀತಿಯಲ್ಲಿ ಕರಗತ ಮಾಡಿಕೊಂಡಿರುವೆಯವೆ? ಇದೆಲ್ಲಾ ನಿನಗೆ ಹೇಗೆ ಸಾಧ್ಯವಾಯಿತು?" ಎನ್ನುವ ನನ್ನ ಮೆಚ್ಚುಗೆ ಹಾಗೂ ಜಿಜ್ಞಾಸಭರಿತ ಮಾತುಗಳನ್ನು, ಒಟ್ಟಿಗೇ ಆತನೆಡೆ ಹರಿಬಿಟ್ಟೆ. ನನ್ನ ಮಾತುಗಳಿಂದ ಸ್ವಲ್ಪ ಸಂಕೋಚಗೊಂಡಂತೆ, ಗಲಿಬಿಲಿಗೊಂಡಂತೆ ಕಂಡು ಬಂದ ಇರ್ಷಾದ್ "ಹಾಗೇನೂ ಇಲ್ಲ ಸಾರ್, 'ಇವನಾರವ, ಇವನಾರವ, ಇವನಾರವ ಎಂದೆನ್ನದಿರು' ಎನ್ನುವ ಭಾವನೆಯಲ್ಲಿ ನನ್ನನ್ನು ತಮ್ಮ ಮನ ಮತ್ತು ಮನೆಗಳಿಗೆ, ತೆರೆದ ತೋಳುಗಳಿಂದ ಆಹ್ವಾನಿಸಿದ ನನ್ನ ಲಿಂಗಾಯಿತ ಸಹಪಾಠಿಗಳು, ನನ್ನಲ್ಲಿ ಶರಣ ಭಾವನೆಯನ್ನು ಬುದ್ಧಿ ಬಂದಾಗಿನಿಂದ ತುಂಬಿದ ಪರಿಣಾಮದ ಕಾರಣ ಇದು ನನಗೆ ಸಾಧ್ಯವಾಗಿದೆ" ಎಂದು ಹೇಳಿದವನು ಮುಂದುವರೆಯುತ್ತಾ, "ಪ್ರತೀ ಸಂಜೆ ಮೂರು ಸಾವಿರ ಮಠದ ಆವರಣದಲ್ಲಿ, ಲಿಂಗಾಯತ ಸ್ನೇಹಿತರ ಒಟ್ಟಿಗೆ ನಾನು ಗಂಟೆಗಟ್ಟಲೆ ಆಟವಾಡುತ್ತಿದ್ದ ಸಮಯದಲ್ಲಿ, ಮಠದಲ್ಲಿ ಹಾಡುತ್ತಿದ್ದ ವಚನಗಳನ್ನು ಕೇಳಿಸಿಕೊಳ್ಳುತ್ತಿದ್ದೆ. ಹಾಗಾಗಿ ಸಹಜವಾಗಿಯೇ ನೂರಾರು ವಚನಗಳು ನನಗೆ ಬಾಯಿಪಾಠವಾಗಿವೆ. ಬೆಳೆದು ದೊಡ್ಡವನಾಗುತ್ತಿದ್ದ ಹಾಗೆ, ಗೆಳೆಯರ ಮನೆಯಲ್ಲಿದ್ದ ಅವರ ಅಮ್ಮಂದಿರು, ಅಜ್ಜಿಯರು ನಾನು ಕಲಿತ ವಚನಗಳಿಗೆ ಭಾವಾರ್ಥವನ್ನ ವಿವರಿಸುತ್ತಿದ್ದರು. ಈ ಕಾರಣದಿಂದ ಅಷ್ಟೋ ಇಷ್ಟೋ ವಚನಗಳ ಪ್ರಜ್ಞೆ ನನ್ನಲ್ಲಿ ನೆಲಸಿದೆ ಸರ್" ಎನ್ನುವಾಗ ಆತನ ಕಣ್ಣಂಚುಗಳಲ್ಲಿ ಜಿನುಗಿದ ನೀರಿನ ಪಸೆಯನ್ನು ಗುರುತಿಸಿದೆ.


ಅಷ್ಟು ಹೊತ್ತಿಗೆ, ಇರ್ಷಾದ್ ಮೊಬೈಲಿಗೆ ಒಂದು ಕರೆ ಬಂದಿತು. ಆತನ ಮೊಬೈಲು ಸುಶ್ರಾವ್ಯವಾಗಿ "ಕಳಬೇಡ ಕೊಲಬೇಡ" ಎನ್ನುವ ಬಸವಣ್ಣನವರ ಲೋಕಪ್ರಸಿದ್ಧ ವಚನವನ್ನು ಉಲಿಯಲು ಪ್ರಾರಂಭಿಸಿತು. ಜಂಗಮವಾಣಿಯಲ್ಲಿ ವಚನದ ಉಲಿ. ತನಗೆ ಬಂದ ಕರೆಯನ್ನು ಸ್ವೀಕರಿಸಲು ಹೋದ ಇರ್ಷಾದನನ್ನು ತಡೆದು, ವಚನ ಪೂರ್ತಿಯಾಗುವವರೆಗೆ ತನ್ಮಯತೆಯಿಂದ ಕಣ್ಣು ಮುಚ್ಚಿಕೊಂಡು, ಆಲಿಸಿದೆ. ವಚನದ ಒಂದು ಸುತ್ತು ಮುಗಿದಾಗ, ತನ್ನ ಕರೆಯನ್ನು ಸ್ವೀಕರಿಸಲು ಆತನಿಗೆ ಹೇಳಿದೆ. ಫೋರ್ ಮನ್ ವರ್ಗೀಸ್ ನಿಂದ,  ತನಗೆ ಬಂದ ಕಾಲ್ ಗೆ ಉತ್ತರಿಸಲು ಆತ  ಒಂದು ಮಗ್ಗುಲಿಗೆ ಸರಿದಾಗ,  ನನ್ನ ಮೊಬೈಲಿಗೂ ಒಂದು ಕರೆ ಬಂದಿತು. "ಹಾವಿನ ದ್ವೇಷ ಹನ್ನೆರೆಡು ವರುಷ" ಎಂದು ಉಲಿಯಲು ತೊಡಗಿದ ಮೊಬೈಲನ್ನು ಆತುರಾತುರವಾಗಿ ಕಟ್ ಮಾಡಿ, ಇರ್ಷಾದ್ ಏನಾದರೂ ಇದರ ಬಗ್ಗೆ ಗಮನಿಸಿದನೇ? ಎಂದು ಓರೆಗಣ್ಣಿನಿಂದ ಆತನ ಕಡೆ ದೃಷ್ಟಿ ಹಾಯಿಸಿದೆ.


ಇರ್ಷಾದ್ ತನ್ನ ಸಂಭಾಷಣೆಯಲ್ಲಿಯೇ ನಿರತನಾದ ಹಾಗೆ ಕಾಣಿಸಿದ ಕಾರಣ ಆತ,  ನನ್ನ ಮೊಬೈಲಿನ ರಿಂಗಿನ ಸದ್ದನ್ನು ಕೇಳಿಸಿಕೊಂಡಿರಲಾರ ಎನ್ನುವ ಅಲ್ಪ ಸಮಾಧಾನದೊಂದಿಗೆ, ಮೊಬೈಲ್ ಮಾತುಕತೆಯಲ್ಲಿ ತಲ್ಲೀನನಾದ ಇರ್ಷಾದ್ ಬೆನ್ನು ತಟ್ಟಿ, ದುರ್ದಾನ ತೆಗೆದುಕೊಂಡವನಂತೆ,  ಕಾರ್ ಶೆಡ್ಡಿನತ್ತ ದಾಪುಗಾಲು ಹಾಕಿದೆ. ದೇಹ ದೇವಸ್ಥಾನದ ಪ್ರಾಂಗಣ ತಲುಪಿದರೂ ನನ್ನ ಮನಸ್ಸಿಗೆ ಇರ್ಷಾದ್ ಕನ್ನ ಹಾಕಿದ್ದ. ನನಗೆ ಸಾಧ್ಯವಾಗದೇ ಹೋದ ಶರಣಗುಣ ಸಂಹಿತೆ ಮುಸ್ಲಿಂನಾದ ಇರ್ಷಾದನಿಗೆ ಒಲಿದ ಪರಿಯನ್ನು ಅರ್ಥೈಸಿಕೊಳ್ಳುವ ವಿಫಲ ಯತ್ನದ ನಂತರ, ನನ್ನ ಮನಸ್ಸಿಗೆ ತೋಚಿದ್ದು ಒಂದೇ ಒಂದು ಸಮಾಧಾನಕರವೆನ್ನುವ ಉತ್ತರ. ಧಾರವಾಡದ ಮಣ್ಣಿನ ಗುಣವೇ ಹಾಗಿದೆ. ಅಲ್ಲಿ ಹುಟ್ಟಿದ ಎಲ್ಲರೂ ಬಸವಾದಿ ಶರಣರ ವಿಚಾರಧಾರೆಗಳಲ್ಲಿ ಮಿಂದವರೇ ಆಗಿದ್ದಾರೆ. ಜಾತಿ, ಮತ, ಲಿಂಗ ಬೇಧಗಳನ್ನ ಮೀರಿದ ಒಂದು ಶರಣ ಪ್ರವಾಹದ ಪ್ರಚಂಡ ಹರಿವಿಗೆ ಸಿಕ್ಕ ಅಲ್ಲಿನ ಎಲ್ಲಾ ಮಂದಿ,  ಸಹಜವಾಗಿಯೇ ಶರಣಗುಣಗಳನ್ನು ತಮ್ಮೊಳಗೆ ಅವಿರ್ಭವಿಸಿಕೊಂಡಿರುತ್ತಾರೆ. ಧಾರವಾಡದ ಮಂದಿಯ ಶರಣಸಂಗಾತವನ್ನು ಜಲಪಾತದ ನೊರೆಯಲ್ಲಿ ನಿತ್ಯವೂ ಮಿಂದೇಳುವ ಜಲಚರಗಳ ನೀರಿನ ಸಾಂಗತ್ಯಕ್ಕೆ ಹೋಲಿಕೆ ಮಾಡಬಹುದಾದರೆ,  ಮಧ್ಯ ಕರ್ನಾಟಕದ ನಮ್ಮಂತಹವರಿಗೆ, ಶರಣರ ವಿಚಾರಚಿಂತನೆಗಳಲ್ಲಿ ತೋಯುವುದು ಎಂದರೆ ಬಲವಂತದ ಮಾಘಸ್ನಾನ ಅಷ್ಟೇ. ಎಷ್ಟೆಂದರೂ ಸಹಜವಾಗಿ ನಿಮ್ಮಲ್ಲಿ ಮೈಗೂಡಿದ್ದು,  ಅದೇ ಸಹಜತೆಯಲ್ಲಿ ನಿಮ್ಮ ಮೈಮನಗಳಲ್ಲಿ ಪ್ರಖರಗೊಳ್ಳುತ್ತದೆ. ಶರಣಸಾಹಿತ್ಯವನ್ನು ಪ್ರಜ್ಞಾಪೂರ್ವಕವಾಗಿ ಅಭ್ಯಸಿಸಿದ ನನ್ನಂತವನ  ದೃಷ್ಟಿಗೆ ಅಗೋಚರವಾದ ಶರಣ ಬದುಕಿನ ಅನೂಹ್ಯ ಒಳನೋಟಗಳು, ಧಾರವಾಡದ ಮಂದಿಗೆ, ಅಲ್ಲಿನ ಮಣ್ಣಿನ ಗುಣದ ಕಾರಣ, ಸಹಜವಾಗಿಯೇ ಲಭಿಸಿವೆ.


ಮುಂದಿನ ಜನ್ಮ ಎನ್ನುವುದು ಇದ್ದರೆ ಬಸವಣ್ಣನಲ್ಲಿ ನಾನು ಬೇಡುವುದು ಇಷ್ಟೇ. ನನ್ನನ್ನು ಧಾರವಾಡದ ಮಣ್ಣಿನಲ್ಲಿ ಹುಟ್ಟಿಸು ಎಂದು ಬಸವನನ್ನು ಗದ್ಗತನಾಗಿ ಕೇಳಿಕೊಳ್ಳುತ್ತೇನೆ. ಯಾಕೋ ಲಿಂಗಾಯತನಾಗಿ ಹುಟ್ಟಿಸು ತಂದೇ ಎಂದು ಪ್ರಾರ್ಥಿಸುವ ಇಚ್ಚೆಯಾಗುತ್ತಿಲ್ಲ. ಕಾರಣ, ಧಾರವಾಡದಲ್ಲಿ ಹುಟ್ಟಿ ಶರಣನಾಗುವುದಕ್ಕೆ ಲಿಂಗಾಯತನಾಗುವ ಅನಿವಾರ್ಯತೆ ರವಷ್ಟೋ ಇಲ್ಲ. ಯಾವ ಜಾತಿಮತದಲ್ಲಿ ಹುಟ್ಟಿದರೂ ಆದೀತು. ಕಡೆಗೆ ಮುಸ್ಲಿಂನಾದರೂ ನಡೆದೀತು, ಧಾರವಾಡದ ಕಪ್ಪುಮಣ್ಣಿನ ಸಾಂಗತ್ಯ ನನ್ನ ಭವಿಷ್ಯದ ಜೀವನಕ್ಕೆ ಬೇಕೇ ಬೇಕು. ತನ್ಮೂಲಕ ಈ ಜನ್ಮದಲ್ಲಿ ಅರಿವಿನ ಸಾಕ್ಷಾತ್ಕಾರಕ್ಕೆ ಒಲಿಯದ ಶರಣರ ಅಪರೂಪದ ವಿಚಾರಗಳು ನನ್ನ ಒಳಮನಸ್ಸಿಗೆ ಹೊಳೆದಾವು.


ಎನ್.ಸಿ. ಶಿವಪ್ರಕಾಶ್ 

ಮಸ್ಕತ್, ಒಮಾನ್

Comments