Skip to main content
.., ಹೊನ್ನು, ಮಣ್ಣು
ಹೆಣ್ಣು, ಹೊನ್ನು, ಮಣ್ಣಿಂದ ಜಗಕೆ ಕೆಡಕೆನ್ನುವಿರಿ
ಸ್ಥಾವರಗಳೊಡೆ ಜಂಗಮವ ಸಮೀಕರಿಸುತ ನಿಮ್ಮೊಳಗಣ ಶರಣ ಅರಿವ ಕೊಲ್ಲುವಿರಿ!
ಉಡುತಡಿಯ ಅಕ್ಕನು ಬಯಸಿದಳೆ ಮಲ್ಲಿಕಾರ್ಜುನಗೆ ಕೇಡ?
ನಾಗಲಾಂಬಿಕೆಯೆಂದು ಕಾಡಿದಳು ಬಸವನ ಮಂಡಿಸುತ ಕಾರ್ಪಣ್ಯಗಳ ಮೋಡ?
ಶರಣೆಯರಿಲ್ಲದೆ ಅನುಭಾವದ ಕಳೆ ಕಟ್ಟುತಿತ್ತೆ ಅನುಭವ ಮಂಟಪದ ಹಜಾರಕೆ?
ನೀಲಮ್ಮನಿಲ್ಲದೆ ಜಂಗಮ ದಾಂಗುಡಿಯಿಡುತಿತ್ತೆ ಬಸವನ ಮಹಾಮನೆಯಂಗಳಕೆ?
ಕುಣಿಸಿರಬಹುದು ನಿನ್ನ ನಿಯತ್ತುಗಳ ಮರ್ಕಟನನು ಹೊನ್ನು, ಮಣ್ಣಿನ ಮೋಹ ಮಾಯೆ
ಜನನಿಯಾಗಿ ನಿನ್ನ ಪೊರೆದ ಹೆಣ್ಣು ಎನಿತಡ್ಡಿವೆನಿಪಳು ಆಧ್ಯಾತ್ಮ ಉನ್ನತಿಗೆ ನೀ ಒಲಿಯೆ?
ಪುರುಷ ನೀನೆಂಬ ಅಹಂ ನಿನ್ನ ಮನದಳೊಕ್ಕು ತೃಣವೆನಿಸುತಿದೆ ಪ್ರಕೃತಿ ಚೈತನ್ಯವನು
ಹೊನ್ನು, ಮಣ್ಣು ಮನದಿಚ್ಛೆೆಯಂತೆ ಗಳಿಸಬಹುದೆಂಬ ಹುಂಬತನ ಕಾಡುತಿದೆ ನಿನ್ನನು
ಪಡೆದು ನೋಡು ಈ ಜನುಮದ ಮತ್ತೊಬ್ಬ ಅಮ್ಮನನು!
ಇನ್ನೊಮ್ಮೆ ಉಸುರದಿರು ಹೆಣ್ಣ ಹೆಸರ ಹೊನ್ನು ಮಣ್ಣುಗಳೊಡಗೂಡಿ
ನಾನು ಶಿವ ಸುಟ್ಟು ಬಿಡುವೆ ಲೋಕದ ವಿಟಪುರುಷರ ಶರಣಸಂಕುಲದೊಡಗೂಡಿ!
ಎನ್.ಸಿ. ಶಿವಪ್ರಕಾಶ್
ಮಸ್ಕತ್, ಒಮಾನ್
Comments
Post a Comment