ಕಲ್ಯಾಣದಣ್ಣ, ಅಣ್ಣಾ ಬಾರೋ ಬಸವಣ್ಣಾ 


ನಾನಾಗ ನಮ್ಮೂರಿನ ಸರಕಾರಿ ಬಾಲಕ ಬಾಲಕಿಯರ ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದೆ. ಬೇಸಗೆಯ ಸುಧೀರ್ಘ ರಜೆಯ ನಂತರ, ನಾನು ಐದನೆ ತರಗತಿಯಿಂದ ಬಡ್ತಿ ಹೊಂದಿ, ಖುಷಿಯಿಂದ ಹೊಕ್ಕ ಆರನೇ ಇಯತ್ತೆಯ ಕ್ಲಾಸುಗಳು ಪ್ರಾರಂಭವಾಗಿ ಒಂದು ವಾರ ಕಳೆದಿರಬಹುದಷ್ಟೆ.  ಅಂದು ಮಂಗಳವಾರ. ಕ್ಲಾಸಿನ ಮೊದಲನೇ ಪಿರಿಯಡ್ಡಿನಲ್ಲಿ ಇಂಗ್ಲೀಷ್ ಪಾಠ ಇನ್ನೇನು ಶುರುವಾಗಬೇಕು, ಅಷ್ಟರಲ್ಲಿ, ಶಾಲೆಯ ಜವಾನ ತಮ್ಮಯ್ಯ ಒಬ್ಬ ಹುಡುಗನೊಟ್ಟಿಗೆ,  ತರಗತಿಯ ಬಾಗಿಲ ಬಳಿ ಬಂದು ನಿಂತಿದ್ದು,  ಅದಾಗಲೇ ತರಗತಿಯೊಳಗೆ ಕಾಲಿಟ್ಟು, ತಮ್ಮ ಬೋಧನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಭೀಮಪ್ಪ ರೆಡ್ಡಿ ಮಾಸ್ತರರ ಚುರುಕು ಕಣ್ಣುಗಳಿಂದ ತಪ್ಪಿಸಕೊಳ್ಳಲಾಗಲಿಲ್ಲ. ತರಗತಿಯ ಹೊಸ್ತಿಲ ಹೊರಗೇ ನಿಂತಿದ್ದ ಇಬ್ಬರನ್ನೂ ಮಾಸ್ತರು ಒಳಗೆ ಬರ ಹೇಳಿದರಾದರೂ, ಕೇವಲ ತಾನು ಕರೆ ತಂದಿದ್ದ ಹುಡುಗನನ್ನಷ್ಟೇ ಕ್ಲಾಸಿನ ಒಳಗೆ ಕಳುಹಿಸಿದ ತಮ್ಮಯ್ಯ, "ಸಾರು, ಹೊಸಾ ಹುಡುಗ, ಇವತ್ತು ಅಡ್ಮಿಷನ್ ಆಗೌನೆ, ವಿನುತಾ ಮೇಡಂ ಒಸಿ ನಿಮ್ಗೆ ತಿಳಿಸಿ ಕ್ಲಾಸಿನೊಳಗೆ ಬಿಡಲು ಹೇಳಿದ್ದಾರೆ" ಎಂದವನು ಮಾಸ್ತರರ ಉತ್ತರಕ್ಕೂ ಕಾಯದೆ,  ಅದಾಗಲೇ ಅಲ್ಲಿಂದ ಕಾಲ್ಕಿತ್ತಿದ್ದ.


ಕೆಂಪು, ಕೆಂಪಗೆ ಸಪೂರವಾಗಿ ಇದ್ದ ಹೊಸ ಹುಡುಗ ಕ್ಲಾಸಿನಲ್ಲಿದ್ದ ನಾವು ಇಪ್ಪತ್ತೆಂಟು ವಿದ್ಯಾರ್ಥಿಗಳಿಗಿಂತಲೂ,  ನೀಟಾದ ಬಟ್ಟೆಬರೆ ಧರಿಸಿದ್ದ. ಮಾಸ್ತರನ್ನೂ ಸೇರಿದಂತೆ, ತರಗತಿಯಲ್ಲಿದ್ದ ಯಾರ ಬಟ್ಟೆಗಳೂ ಇಸ್ತ್ರಿಯನ್ನು ಕಾಣದೆ ತಿಂಗಳುಗಳೇ ಆಗಿದ್ದವೋ ಏನೋ! ಆದರೆ ಈ ಹೊಸಾ ಹುಡುಗನ ತಿಳಿ ಹಸಿರು ಬಣ್ಣದ ಅಂಗಿ ಮತ್ತು ಖಾಕಿ ಬಣ್ಣದ ನಿಕ್ಕರುಗಳು, ಹುಡುಗನ ದೇಹವನ್ನು ಅಲಂಕರಿಸುವ ಈ ಮೊದಲು, ಗರಂ ಆಗಿದ್ದ ಇಸ್ತ್ರಿಪೆಟ್ಟಿಗೆಯೊಡನೆ ದೊಡ್ಡಮಟ್ಟದಲ್ಲಿಯೇ ತೆಕ್ಕುಮುರೆ ಹಿಡಿದಿದ್ದವು ಎನ್ನುವುದು ನಮ್ಮಲ್ಲಿ ಬಹುತೇಕರಿಗೆ ಮೊದಲ ನೋಟದಲ್ಲಿಯೇ ಅರ್ಥವಾಗಿತ್ತು. ಸ್ವಲ್ಪ ಜಾಸ್ತಿ ಎನ್ನಬಹುದಾದ ಮಟ್ಟಕ್ಕೆ ಎಣ್ಣೆ ಹಚ್ಚಿದ ತಲೆಗೂದಲನ್ನು ನೀಟಾಗಿ ಕ್ರಾಪು ಮಾಡಿಕೊಂಡು ಶಾಲೆಗೆ ಬಂದಿದ್ದ ಹುಡುಗ, ನಮ್ಮ ತಲೆಯ ಮೇಲೆ ನಾಲ್ಕೈದು ಇಂಚುಗಳ ಎತ್ತರಕ್ಕೆ ಕೆದರಿ ನಿಂತಿದ್ದ, ತಿಂಗಳುಗಳಿಂದ ಪರ್ಯಾಪ್ತ ಪೋಷಣೆಯನ್ನು ಕಾಣದ ಕೆಂಚು ಕೂದಲುಗಳ ಪೊಗದಸ್ತಾದ ಕುರುಚಲು ಕಾಡುಗಳನ್ನು ಅಣಕಿಸುವಂತಿತ್ತು.


"ಹೇಯ್, ಎದ್ದೇಳೋ, ನಿನ್ನ ಪರಿಚಯ ಮಾಡಿಕೊಡು" ಎಂದು ತರಗತಿಯ ಹಿಂದಿನ ಬೆಂಚಿನಲ್ಲಿ ಮೂಲಂಗಿ ವಿಶ್ವನಾಥ, ಗೊಲ್ಲರ ಓಬಳೇಶಿ, ಸಂಗಟಿ ಕೃಷ್ಣಾರೆಡ್ಡಿಯೊಡನೆ ಸೀಟು ಹಂಚಿಕೊಂಡಿದ್ದ,  ಹೊಸಾ ಹುಡುಗನನ್ನು ಉದ್ದೇಶಿಸಿ ನುಡಿದ ಭೀಮಪ್ಪ ಮಾಸ್ತರ ಮಾತಿಗೆ, ಸ್ವಲ್ಪ ಹೊತ್ತು ಗಲಿಬಿಲಿಗೊಂಡಂತೆ  ಕಂಡು ಬಂದ ಹುಡುಗ,  ಸಂಕೋಚದಿಂದ ದೇಹವನ್ನು ಮುದ್ದೆ ಮಾಡಿಕೊಂಡು,  ಒಂದೆರೆಡು ಬಾರಿ ಹುಸಿ ಕೆಮ್ಮು ಕೆಮ್ಮುತ್ತಾ,  ಗಂಟಲು ಸರಿ ಪಡಿಸಿಕೊಂಡ. "ಸರ್, ನನ್ನ ಹೆಸರು ಸಿದ್ಧಲಿಂಗಾಚಾರಿ ಅಂತ. ನಮ್ಮೂರು ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲ್ಲೂಕಿನ ಅಳಿಗನೂರು" ಎಂದು ತನ್ನ ಪರಿಚಯ ಮಾಡಿಕೊಳ್ಳುವುದಕ್ಕೆ ಮುಂದಾಗುತ್ತಿದ್ದ ಹಾಗೆಯೇ, "ಅಲ್ಲಯ್ಯಾ ಆಚಾರಿ, ಅಲ್ಲಿನ ಶಾಲೆ ಬಿಟ್ಟು ಇಲ್ಲಿಗೇಕೆ ಬಂದೆ?" ಎನ್ನುವ ಮೇಷ್ಟ್ರ ಮಾತು ಸಿದ್ಧಲಿಂಗನ ಕಿವಿಗೆ ರಪ್ಪನೆ ರಾಚಿತು. "ನಮ್ಮ ಊರಿನಲ್ಲಿ ಐದನೇ ತರಗತಿಯವರೆಗೆ ಮಾತ್ರ ಶಾಲೆ ಇದೆ ಸರ್. ಆರನೇ ತರಗತಿಯಿಂದ, ನಾವು ದಿನಾಲು ನಾಲ್ಕು ಕಿಮೀ ದೂರವಿರುವ ತೆಕ್ಕಲಕೋಟೆಗೆ ನಡೆದುಕೊಂಡು ಹೋಗಬೇಕು. ಈ ಊರಿನಲ್ಲಿ ನನ್ನ ತಾತನ ಮನೆ ಇದೆ. ನಮ್ಮ ಅಪ್ಪ ಅಮ್ಮ ಇಲ್ಲಿಯೇ ಓದು ಎಂದು ನನ್ನನ್ನು ತುರುವನೂರಿಗೆ ಕಳುಹಿಸಿದ್ದಾರೆ" ಎಂದು ಉಸಿರು ಬಿಗಿ ಹಿಡಿದ ದನಿಯಲ್ಲಿ, ಒಂದೇ ಸಮನೆ, ದಂದಕ್ಕಿಯಲ್ಲಿ ಕಟ್ಟಿ ಹಾಕಿದ ಅದೇ ತಾನೆ ಈದ ಎಮ್ಮೆಯಂತೆ, ತರಗತಿಯ ಮುಂದಿನ ಬೆಂಚುಗಳಲ್ಲಿ ವಿರಾಜಮಾನರಾದ, ಹಿಂಡಿನಷ್ಟಿದ್ದ ವಿದ್ಯಾರ್ಥಿನಿಯರಿಗೂ,  ಸರಿಯಾಗಿ ಕೇಳಿಸದೆ ಹೋಗುವ ಹಾಗೆ,  ಆತುರಾತುರವಾಗಿ, ಉಸುರಿದ.


"ಆಯ್ತು ಕೂತ್ಕೋ, ನಾಳೆಯಿಂದ ಸರಿಯಾದ ಸಮಯಕ್ಕೆ ತರಗತಿಗೆ ಬರಬೇಕು, ಹೋಂವರ್ಕ್ನಲ್ಲಿ ನಾನು ಬಹಳ ಸ್ಟ್ರಿಕ್ಟ್. ಹೋಂವರ್ಕ್ ಮಾಡಿಕೊಂಡು ಬರದೇ ಇದ್ದರೆ, ತರಗತಿಗೆ ಸೇರಿಸಿಕೊಳ್ಳುವುದೇ ಇಲ್ಲ" ಎಂದು ಪ್ರತೀ ತರಗತಿಯಲ್ಲಿ ಕನಿಷ್ಠ ಪಕ್ಷ, ನಾಲ್ಕಾರು ಬಾರಿಯಾದರೂ ಬಿಡುವ,  ಮಾಮೂಲಿ ಡೈಲಾಗ್ ಬಿಟ್ಟರು. "ಸರ್, ನಾನು ಕ್ಲಾಸಿಗೆ ಹೋಮ್ ವರ್ಕ್ ಮಾಡಿಕೊಂಡು ಬರುವುದೇ ಇಲ್ಲ. ನನ್ನನ್ನು ಯಾಕೆ ಇಲ್ಲಿಯವರೆಗೆ ಒಂದು ದಿನವೂ ಕ್ಲಾಸಿನಿಂದ ಹೊರಗೆ ಕಳುಹಿಸಿಲ್ಲ?" ಎನ್ನುವುದು ಗೌಡ್ರ ಕಲ್ಲಪ್ಪಜ್ಜರ ದಡ್ಡ ಮಹೇಶನ ಮನಸ್ಸಿನಲ್ಲಿ ಮೂಡಿ ಅಲ್ಲಿಯೇ ಉಳಿದ ಪ್ರಶ್ನೆಯಾದರೆ, ದಿನವೂ ಕಷ್ಟಪಟ್ಟುಕೊಂಡು ಹೋಮ್ ವರ್ಕ್ ಮಾಡಿಕೊಂಡು ಬರುತ್ತೇನೆ, ಒಂದು ದಿನವೂ ಹೋಮ್ ವರ್ಕ್ ನೋಡಿಯಾದ ಮೇಲೆ,  ಮೇಷ್ಟ್ರು ಶಹಬ್ಬಾಸ್ ಎಂದು ಹೇಳುವುದೇ ಇಲ್ಲ" ಎಂದು ಮನಸ್ಸಿನಲ್ಲಿಯೇ ಅವಲತ್ತು ಪಟ್ಟುಕೊಳ್ಳುವ ಸರದಿ, ಸುಬ್ಬಣ್ಣಶೆಟ್ಟರ ಕೊನೆಯ ಮಗಳು, ಹುಡುಗಿಯರಲ್ಲಿ ಸಾಕಷ್ಟು ಜಾಣೆಯಾದ,  ಜ್ಯೋತಿಪ್ರಭಾಳದಾಗಿತ್ತು.


ಸಿದ್ಧಲಿಂಗಾಚಾರಿ ಪ್ರಹಸನದಿಂದ ತಟ್ಟನೆ ತಮ್ಮ ಎಂದಿನ ವ್ಯವಹಾರಕ್ಕೆ ಶೀಘ್ರವಾಗಿ ಮರಳಿದ ಭೀಮಪ್ಪ ಮಾಸ್ತರು, ತಾವು ನಿನ್ನೆ ಪ್ರಾರಂಭಿಸಿದ್ದ ಪಾಠವನ್ನು ಮುಂದುವರೆಸುವಂತೆ ಕಂಡವರು, ಇದ್ದಕ್ಕಿದ್ದ ಹಾಗೆಯೇ "ಸಿದ್ಧಲಿಂಗ, ಐದನೇ ಕ್ಲಾಸಿನಲ್ಲಿ ಇಂಗ್ಲೀಷ್ ಚೆನ್ನಾಗಿ ಕಲಿತಿದ್ದೀಯೋ? ಹೆಂಗೆ? ಸ್ಪೆಲ್ಲಿಂಗ್ ಎಲ್ಲಾ ಸರಿಯಾಗಿ ಗಟ್ಟು ಹೊಡೆದಿದ್ದೀಯಾ? ಹೆಂಗೆ" ಎನ್ನುವ ಪ್ರಶ್ನೆಯನ್ನು ಹೊಸ ಹುಡುಗನತ್ತ ಎಸೆದರು. ಮೇಷ್ಟ್ರ ಮಾತಿಗೆ ತಟಕ್ಕನೆ ತನ್ನ ಬೆಂಚಿನಿಂದ ಎದ್ದು ನಿಂತ ಆಚಾರಿ, "ಸರ್, ನನಗೆ ಇಂಗ್ಲೀಷ್ ಶ್ಯಾನೆ ಈಸಿ ಸಬ್ಜೆಕ್ಟ್ ಸರ್, ಹೋದ ವರ್ಷ ಇಂಗ್ಲಿಷಿನಲ್ಲಿ ತೊಂಬತ್ತಾರು ಮಾರ್ಕ್ಸ್ ತೆಗೆದಿದ್ದೆ" ಎಂದುಬಿಟ್ಟ. ಸರಕ್ಕನೆ ನನ್ನ ಕಡೆಗೆ ಕಣ್ಣು ಹೊರಳಿಸಿದ ರೆಡ್ಡಿ ಮೇಷ್ಟ್ರು, "ಪ್ರಕಾಶ, ನೋಡಿದೆಯೇನೋ? ನೀನು ಹೋದ ವರ್ಷ ಎಷ್ಟು ತಿಣುಕಿದರೂ ಎಂಬತ್ತಕ್ಕಿಂತ ಹೆಚ್ಚು ಮಾರ್ಕ್ಸ್ ಇಂಗ್ಲೀಷಿನಲ್ಲಿ ನಿನ್ಗೆ ಬರಲಿಲ್ಲವಲ್ಲವಲ್ಲೋ?" ಎನ್ನುತ್ತಾ ನನ್ನನ್ನು ಕಿಚಾಯಿಸ ತೊಡಗಿದರು. ಅಲ್ಲಿಯವರೆಗೆ ತರಗತಿಯಲ್ಲಿ "ಜಾಣ ವಿದ್ಯಾರ್ಥಿ" ಎಂದೇ ಹೆಸರಾಗಿದ್ದ,  ಓದಿನಲ್ಲಿ ತುಂಬಾ ಚುರುಕಾಗಿದ್ದ ನನಗೆ,  ಆಚಾರಿ ರೂಪದಲ್ಲಿ ಒಬ್ಬ ಪ್ರಬಲ ಪೈಪೋಟಿ ನೀಡುವ ಸಹಪಾಠಿ, ಅಚಾನಕ್ ಆಗಿ, ಅಂದಿನ ತರಗತಿಯಲ್ಲಿ, ಇದ್ದಕ್ಕಿದ್ದಂತೆ, ರಾತ್ರೋರಾತ್ರಿ ಊರಿನ ಕುರುಬರ ಕೇರಿಯಲ್ಲಿರುವ, ಭಾರಿ ಗಾತ್ರದ ಹುಣಸೆ ಮರದ ಕೆಳಗೆ ಉದ್ಭವವಾಗುವ ದೇವರು ದಿಂಡರುಗಳಂತೆ,   ದಿಢೀರೆಂದು,  ಪ್ರತ್ಯಕ್ಷವಾಗಿದ್ದ.


ಪಾಠ ಮಾಡುವ ನಡುವೆ,  ಎರಡು ಮೂರು ಬಾರಿ,  ತನ್ನ ಬಗ್ಗೆ ಗುರುಗಳು ಕೇಳದಿದ್ದರೂ, ಬಡಾಯಿ ಕೊಚ್ಚಿಕೊಂಡಿದ್ದ ಸಿದ್ಧಲಿಂಗನನ್ನು, ಭೀಮಪ್ಪ ಮಾಸ್ತರು, ಸಹಜವಾಗಿಯೇ ವಿಧವಿಧವಾದ ಪರೀಕ್ಷೆಗಳಿಗೆ ಗುರಿ ಮಾಡಿದರು. ಪ್ರಭು ಶ್ರೀರಾಮಚಂದ್ರ ಒಡ್ಡಿದ ಎಲ್ಲಾ ಪರೀಕ್ಷೆಗಳಲ್ಲಿಯೂ, ಪ್ರಥಮ ಶ್ರೇಣಿಯಲ್ಲಿಯೇ ಪಾಸಾದ ರಾಮಾಯಣದ ಸೀತಾಮಾತೆಯಂತೆ,  ನಮ್ಮ ರೆಡ್ಡಿ ಮೇಷ್ಟ್ರು ಒಡ್ಡಿದ ಎಲ್ಲಾ ಸವಾಲುಗಳಿಗೂ, ಸರಿಯಾದ ಉತ್ತರಗಳನ್ನು ನೀಡಿದ ಹೊಸ ಹುಡುಗ ಸಿದ್ಧಲಿಂಗ,  ನಿರರ್ಗಳವಾಗಿ ಮಾಸ್ತರು ಹೆಣೆಯುತ್ತಿದ್ದ ಸವಾಲುಗಳ ಸೇತುವೆಗಳನ್ನು, ಅಂದು ಸುಗ್ರೀವನ ವಾನರಸೇನೆ ದಾಟಿದ ರಾಮಸೇತುವೆಯಷ್ಟೇ ಸರಾಗವಾಗಿ ಹಾಯ್ದು ಮುಗಿಸಿದ್ದ. ಭೀಮಪ್ಪ ಮೇಷ್ಟ್ರು ಹಾಗೂ ಸಿದ್ಧಲಿಂಗರ ಮಧ್ಯೆ ನಡೆದ ಈ "ಜುಗಲ್ ಬಂದಿ" ಆಟದಲ್ಲಿ ನಿಜವಾದ ಸೋಲಾಗಿದ್ದು ನನಗೇನೇ. ನನಗೂ ತಿಳಿಯದಿದ್ದ,  ಒಂದೆರೆಡು ಇಂಗ್ಲೀಷ್ ಪದಗಳ ಅರ್ಥಗಳನ್ನು,  "ಪಟ್ ಪಟ್" ಅಂತ ಸಿದ್ಧಲಿಂಗ ಹೇಳುತ್ತಿದ್ದರೆ,  ನಾನು ಕುಳಿತ ಬೆಂಚಿನ ಕಾಲುಗಳು ಭೂಮಿಯ ಒಳಗೆ ಹೂತು ಹೋಗಬಾರದೇ? ಎಂದು ನಾನು ದೇವರಲ್ಲಿ ಪ್ರಾರ್ಥಿಸಿ ಕೊಂಡಿದ್ದೂ  ಉಂಟು.


ತರಗತಿ ಮುಗಿಯುವುದನ್ನೇ ಕಾಯುತ್ತಿದ್ದ ವಿದ್ಯಾರ್ಥಿಗಳೆಲ್ಲರೂ,  ಪಿರಿಯಡ್ ಮುಗಿದ ತಕ್ಷಣ,  ಊರ ಆಸ್ಪತ್ರೆ ಮುಂದಿನ ಸಂತೆ ಬಯಲಿಯಲ್ಲಿ ಕರಡಿ ಆಡಿಸುವವನು ಬಂದರೆ, ಕರಡಿ ಸಮೇತ ಆತನನ್ನು ಮುತ್ತುವ ಹಾಗೆ,  ಸಿದ್ಧಲಿಂಗನನ್ನು ಮುತ್ತ ತೊಡಗಿದರು. ಆಚಾರಿಯನ್ನು ಉಸಿರಾಡಲೂ ಬಿಡದಂತೆ, ತಲೆಗೊಂದು ಪ್ರಶ್ನೆಗಳ ಮಳೆಗೆರೆಯುತ್ತಾ,  ಆತನನ್ನು ಗೋಳು ಹೊಯ್ದುಕೊಳ್ಳತೊಡಗಿದರು. "ಹುಡುಗರ ಗುಂಪು ಚದುರಿದರೆ, ಹೊಸಾ ಹುಡುಗನ ಪರಿಚಯ ಮಾಡಿಕೊಳ್ಳುವುದಕ್ಕೆ ತಮಗೂ ಒಂದು ಅವಕಾಶ ಸಿಗಬಹುದು" ಎಂದು ತುದಿಗಾಲಿನಲ್ಲಿ ನಿಂತು, ಆಚಾರಿಯ ಅಭಿನಂದನೆ ಸಲ್ಲಿಸುವ ಸರದಿಗಾಗಿ ಕಾಯುತ್ತಿದ್ದ ವಿದ್ಯಾರ್ಥಿನಿಯರು, ಅಂದಿನ ದಿನ,  ಅಷ್ಟೊಂದು ಭಾಗ್ಯಶಾಲಿಗಳಾಗಿರಲಿಲ್ಲ. ಕೆಲವೇ ನಿಮಿಷಗಳ ಒಳಗೆ ತರಗತಿಯನ್ನು ಪ್ರವೇಶಿಸಿದ, ಮುಂದಿನ ಪಿರಿಯಡ್ಡಿನ ಗಣಿತದ ಭಕ್ತಪ್ಪ ಮಾಸ್ತರು, ಎಂದಿಗಿಂತ ತುಸು ಬೇಗನೇ ಕ್ಲಾಸಿಗೆ ಪದಾರ್ಪಣೆ ಮಾಡುವ ಮೂಲಕ, ಹುಡುಗಿಯರ ಆಸೆಗಳಿಗೆ ತಣ್ಣೀರು ಎರಚಿದ್ದರು.


ಭಕ್ತಪ್ಪ ಮೇಷ್ಟ್ರು ತಮ್ಮ ಪಾಠವನ್ನು ಶುರು ಮಾಡುವ ಮೊದಲೇ ಎದ್ದು ನಿಂತ ಸಹಪಾಠಿ ಕಾಂತರಾಜು, "ಸರ್ ಇವತ್ತು ನಮ್ಮ ಕ್ಲಾಸಿಗೆ ಹೊಸ ಹುಡುಗ ಬಂದಿದ್ದಾನೆ. ಸಿದ್ಧಲಿಂಗ ಆಚಾರಿ ಎಂದು ಆತನ ಹೆಸರು. ಬಹಳ ಚೆನ್ನಾಗಿ ಓದುತ್ತಾನೆ. ಪ್ರಕಾಶನನ್ನೂ ಮೀರಿಸುತ್ತಾನೆ" ಎಂದು ಬಹಳ ಸಮಯದವರೆಗೆ ಬಹಿರ್ದೆಸೆಗೆ ಹೋಗದೆ,  ತ್ರಾಸಿನಲ್ಲಿ ಸಮಯ ದೂಡುವ ಬಾಲಕನಂತೆ,  ಒಂದೇ ದನಿಯಲ್ಲಿ ಉಸುರ ತೊಡಗಿದ. ಒಂದನೇ ತರಗತಿಯಿಂದಲೂ,  ನನ್ನನ್ನು ಓದಿನಲ್ಲಿ ಹಿಂದಿಕ್ಕಬೇಕು ಎನ್ನುವ ಒಂದೇ ಒಂದು ಗುರಿಯನ್ನು,  ಇಟ್ಟುಕೊಂಡು ಓದುತ್ತಿದ್ದ ಕಾಂತರಾಜ,  ಇಲ್ಲಿಯವರೆಗೆ ನನ್ನನ್ನು ಯಾವ ಸಬ್ಜೆಕ್ಟ್ ಗಳಲ್ಲಿಯೂ ಹಿಂದಿಡಲಿಕ್ಕೆ ಸಾಧ್ಯವಾಗಿರಲಿಲ್ಲ. ಸಾಕಷ್ಟು ಬಾರಿ, ತರಗತಿಗೆ ಎರಡನೆಯವನಾಗಿ ಬರುತ್ತಿದ್ದರೂ, ಮೊದಲನೇ ಮೆರಿಟ್ ವಿದ್ಯಾರ್ಥಿಯಾಗಿ, ಶಿಕ್ಷಕರ ಆದಷ್ಟೂ ಗಮನವನ್ನು ತನ್ನೆಡೆಗೆ ಸೆಳೆದುಕೊಳ್ಳಬೇಕು ಎನ್ನುವ ಮಂಡಿಗೆಯನ್ನು ಮನಸ್ಸಿನಲ್ಲಿಯೇ ತಿನ್ನುತ್ತಿದ್ದ ಕಾಂತರಾಜನ ಬಾಯಿಯಿಂದ, ಅಚಾನಕ್ ಆಗಿ, ಈ ಮೊದಲು ನಾನು ಹೇಳಿದ ಮಾತುಗಳು, ಚಂಡಮಾರುತದ ಕಾರಣದಿಂದಾಗಿ,  ಅಕಾಲಿಕವಾಗಿ ಉದುರುವ ಮಳೆ ಹನಿಗಳಂತೆ,  ಉದುರಿದ್ದವು. ಹೊಸ ಹುಡುಗನ ತಾರೀಫ್ ಮಾಡುವುದಕ್ಕಿಂತ ಹೆಚ್ಚಾಗಿ ನನಗೆ ಅವಮಾನ ಮಾಡಬೇಕು, ಗುರುಗಳ ದೃಷ್ಟಿಯಲ್ಲಿ ನನ್ನ ಸ್ಥಾನವನ್ನು ಕಡಿಮೆ ಮಾಡಬೇಕು ಎನ್ನುವ ಆತುರಕ್ಕೆ ಬಿದ್ದಂತಿದ್ದ ಕಾಂತರಾಜು, ಹೊಸ ಹುಡುಗನ ಆಗಮನದ ಕಾರಣ, ತಾನು ಎರಡನೇ ಸ್ಥಾನದಿಂದ ಮೂರನೇ ಸ್ಥಾನಕ್ಕೋ ಅಥವಾ ನಾಲ್ಕನೇ ಸ್ಥಾನಕ್ಕೋ ಸರಿಯಬೇಕಾಗಬಹುದು ಎನ್ನುವ ಆತಂಕವನ್ನು, ಆ ಕ್ಷಣದಲ್ಲಿ ಹೊತ್ತ ಹಾಗೆ ಕಾಣಲಿಲ್ಲ.


ಕಾಂತರಾಜನ ಮಾತುಗಳನ್ನು ಕೇಳಿಸಿಕೊಂಡ ಭಕ್ತಪ್ಪ ಮಾಸ್ತರು, ಸಿದ್ಧಲಿಂಗನನ್ನು ಪರೀಕ್ಷಿಸುವ ಕೆಲಸಕ್ಕೆ ಅಣಿಯಾದರು. ಮೇಷ್ಟ್ರು ಕೇಳಿದ ಗಣಿತದ ಎಲ್ಲಾ ಪ್ರಶ್ನೆಗಳಿಗೆ,  ಕರಾರುವಕ್ಕಾದ ಉತ್ತರಗಳನ್ನು ಕೊಡುತ್ತಾ ಸಾಗಿದ ಸಿದ್ಧಲಿಂಗ ಆಚಾರಿಯ ರೂಪದಲ್ಲಿ,  ನಮ್ಮ ಶಾಲೆಗೆ ಹೊಸದೊಂದು  ಪ್ರತಿಭೆಯ ಆಗಮನವಾಗಿದ್ದು,  ಅಂದಿನ ಎಲ್ಲಾ ಕ್ಲಾಸುಗಳು ಮುಗಿಯುವ ವೇಳೆಗೆ, ಎಲ್ಲಾ ವಿದ್ಯಾರ್ಥಿಗಳ ಗಮನಕ್ಕೂ ಬಂದಿತ್ತು. ಎಲ್ಲಾ ವಿಷಯಗಳಲ್ಲಿಯೂ,  "ಅದ್ಭುತ" ಎನ್ನಬಹುದಾದ ಹಿಡಿತವನ್ನು ಹೊಂದಿದ ಸಿದ್ಧಲಿಂಗ, ಅಲ್ಲಿಯವರೆಗೆ ಎಲ್ಲಾ ತರಗತಿಗಳಲ್ಲಿಯೂ ಮಾನಿಟರ್ ಆಗಿ ಮಿಂಚುತ್ತಿದ್ದ, ನನ್ನ ಸ್ಥಾನವನ್ನು ಏಕಾಏಕಿ ಕಸಿದುಕೊಂಡಂತೆ,  ಅಂದಿನ ರಾತ್ರಿ ಬಿದ್ದ ಕೆಟ್ಟ ಕನಸೊಂದು ನನ್ನ ಚೆಡ್ಡಿಯನ್ನು ರವಷ್ಟು ಒದ್ದೆ ಮಾಡಿದ್ದು ನನ್ನ ಅರಿವಿಗೆ ಬರುವ ವೇಳೆಗೆ, ಪಕ್ಕದ ಮನೆಯ ಪಂದ್ರುಪಲ್ಲೆ ಸೀತಣ್ಣನ ಮನೆಯ ಹುಂಜ ಕೂಗಿ, ಹತ್ತಾರು ನಿಮಿಷಗಳೇ ಕಳೆದಿದ್ದವು.


ಅಲ್ಲಿಂದ ಮುಂದೆ ತರಗತಿಯಲ್ಲಿ ಸಿದ್ಧಲಿಂಗಾಚಾರಿಯ ಹೊಸ ಶೆಕೆಯೊಂದು ಪ್ರಾರಂಭವಾಯಿತು. ಆರನೇ ಇಯತ್ತೆಯನ್ನು ಮೀರಿದಂತೆ, ಐದು ಹಾಗೂ ಏಳನೇ ತರಗತಿಗಳಲ್ಲಿಯೂ ಹರಡತೊಡಗಿದ ಆಚಾರಿಯ ಖ್ಯಾತಿ, ಬಹಳ ಅಲ್ಪ ಸಮಯದ ಅಂತರಾಳದಲ್ಲಿಯೇ,  ಆತನನ್ನು ಇಡೀ ಶಾಲೆಯ "ಕಣ್ಮಣಿ"ಯನ್ನಾಗಿಸಿತ್ತು. ಅಲ್ಲಿಯವರೆಗೆ ನನ್ನನ್ನು ಕೊಂಡಾಡುತ್ತಿದ್ದ ಶಿಕ್ಷಕವರ್ಗ,  ಈಗೀಗ ಸಿದ್ಧಲಿಂಗನ ಗುಣಗಾನವನ್ನು ಮಾಡತೊಡಗಿದ್ದರು. "ಓದಿದರೆ ಪ್ರಕಾಶನ ಹಾಗೆ ಓದಬೇಕು" ಎನ್ನುವ ವಾಕ್ಯವನ್ನು ಕೇಳುತ್ತಲೇ ಬೆಳೆದಿದ್ದ ನಾನು, ಈಗಲೂ ಅದೇ ವಾಕ್ಯವನ್ನೇ ಶಾಲೆಯ ಸಕಲ ಗುರುಗಳ ಬಾಯಿಯಲ್ಲಿಯೂ ಕೇಳುತ್ತಿದ್ದೆ. ಆದರೆ ಅವರು ಆಡುವ ವಾಕ್ಯದಲ್ಲಿ "ಪ್ರಕಾಶ" ಎನ್ನುವ ಹೆಸರು ಮಾಯವಾಗಿ, ಅದರ ಜಾಗದಲ್ಲಿ "ಸಿದ್ಧಲಿಂಗ" ಎನ್ನುವ ನಾಮಧೇಯ ಒಡಮೂಡಿತ್ತು. ಎಲ್ಲಾ ವಿಷಯಗಳಲ್ಲಿಯೂ,  ನನಗಿಂತ ಹೆಚ್ಚಿನ ಬುದ್ಧಿಮತ್ತೆಯನ್ನು ಪ್ರದರ್ಶಿಸುತ್ತಿದ್ದ ಸಿದ್ಧಲಿಂಗಾಚಾರಿಯನ್ನು,  ದಿನಗಳೆದಂತೆ ನಾನೂ ಮೆಚ್ಚಲು ಶುರು ಹಚ್ಚಿಕೊಂಡೆ

. ಎಷ್ಟೇ ಹೊಗಳಿಕೆಗಳು ಬಂದರೂ, ಅವುಗಳನ್ನು ನೆತ್ತಿಗೇರಿಸಿಕೊಳ್ಳದೆ,  ವಾರಗೆಯ ಹುಡುಗ ಹುಡುಗಿಯರಲ್ಲಿ ಬಹಳ  ಸಹಜ, ಸರಳ ರೀತಿಯಲ್ಲಿ ಬೆರೆಯುತ್ತಿದ್ದ ಆಚಾರಿ, ಅರ್ಧವಾರ್ಷಿಕ ಪರೀಕ್ಷೆಗಳು ಸಮೀಪವಾಗುವ ವೇಳೆಗಾಗಲೇ, ನನ್ನ ಅತ್ಯಂತ ಪ್ರೀತಿಪಾತ್ರನಾದ ಸ್ನೇಹಿತನಾಗಿ, ಮಾರ್ಪಾಡು ಹೊಂದಿದ್ದ.


ಸಿದ್ಧಲಿಂಗ ಆಚಾರಿ,  ಉಳಿದ ವಿಷಯಗಳಲ್ಲಿ ಎಷ್ಟೇ ಸೂಟಿಯಾಗಿದ್ದಾರೂ,  ಕನ್ನಡದ ವಿಷಯದಲ್ಲಿ ಮಾತ್ರ ನನ್ನ ಸಾರ್ವಭೌಮತ್ವ ಅಭಾದಿತವಾಗಿಯೇ ಉಳಿದಿತ್ತು. ರಾಮಪ್ಪ ಮೇಷ್ಟ್ರ ಕನ್ನಡ ತರಗತಿಗಳ ಆಗ್ರತಾಂಬೂಲ ನನಗೇ,  ಅನೂಚಾನವಾಗಿ,  ಸಲ್ಲಿಸಲ್ಪಡುತ್ತಿತ್ತು. ವ್ಯಾಕರಣವೇ ಇರಲಿ, ಪ್ರಬಂಧಗಳೇ ಇರಲಿ, ಕವನಗಳ ಕಂಠಪಾಠಗಳೇ ಇರಲಿ, ಕನ್ನಡ ಕಡೆಗೂ ನನ್ನ ಕೈ ಬಿಟ್ಟಿರಲಿಲ್ಲ. ಸಿದ್ಧಲಿಂಗ ಎಷ್ಟೇ ಪ್ರಯತ್ನ ಮಾಡಿದರೂ, ಕನ್ನಡತಾಯಿ ನನ್ನ ಮೇಲೆ ತೋರಿಸಿದಷ್ಟು ಮಮತೆಯನ್ನು, ಆತನ ಮೇಲೆ ತೋರಿಸುತ್ತಿರಲಿಲ್ಲ. ತರಗತಿಯ "ಬುದ್ಧಿವಂತ ವಿದ್ಯಾರ್ಥಿ" ಎನ್ನುವ ಹೆಗ್ಗಳಿಕೆಯೂ ನನ್ನನ್ನು ಮತ್ತು ಸಿದ್ಧಲಿಂಗನನ್ನು ಹೆಚ್ಚು ಹತ್ತಿರಕ್ಕೆ ತಂದು ನಿಲ್ಲಿಸಿದ್ದವು. ಆತನ ಸಾಮೀಪ್ಯಕ್ಕಾಗಿ ನಾನು ತುಡಿಯುವಷ್ಟೇ ತೀವ್ರವಾಗಿ ಆತನೂ ನನ್ನ ಗೆಳೆತನಕ್ಕಾಗಿ ಹಂಬಲಿಸುತ್ತಿದ್ದ. ಎಷ್ಟೆಂದರೂ, ಆತ ಇಂದು ಪಾಳೆಗಾರಿಕೆ ಮಾಡುತ್ತಿರುವ ಪಟ್ಟಣದ ನಿಕಟಪೂರ್ವ ಪಾಳೇಗಾರ ನಾನೇ ಅಲ್ಲವೇ? ಎನ್ನುವ ತಥ್ಯವೂ ನನ್ನಲ್ಲಿ ಒಂದು ಚೂರು ಸಮಾಧಾನವನ್ನು ಆಗಿಂದಾಗ್ಗೆ ನೀಡುತ್ತಲೇ ಇತ್ತು.


ಶಾಲೆಯಲ್ಲಿ ನಡೆಯುವ ಕನ್ನಡ ಪ್ರಬಂಧ ಸ್ಪರ್ಧೆ, ಆಶುಭಾಷಣ ಸ್ಪರ್ಧೆ, ಚರ್ಚಾ ಸ್ಪರ್ಧೆಗಳಲ್ಲಿ,  ಪ್ರತೀ ವರ್ಷದಂತೆ, ಆರನೇ ತರಗತಿಯ ಆ ವರ್ಷದಲ್ಲಿಯೂ,  ಬಹುಮಾನಗಳ ಸುರಿಮಳೆಯಾಗಿದ್ದು ನನ್ನ ಮೇಲೆಯೇ. ಪ್ರತೀ ಸ್ಪರ್ಧೆಯಲ್ಲಿಯೂ ಭಾಗವಹಿಸಿದ್ದ ಸಿದ್ಧಲಿಂಗ, ನಾನು ಬಹುಮಾನ ತೆಗೆದುಕೊಳ್ಳಲು ವೇದಿಕೆಯನ್ನು ಏರುವಾಗ,  ಚಪ್ಪಾಳೆ ತಟ್ಟುವ ಕೆಲಸಕ್ಕಷ್ಟೇ ತೃಪ್ತಿಪಟ್ಟು ಕೊಳ್ಳಬೇಕಾಗಿ ಬಂದಿದ್ದು, ನನ್ನ ವಿಕಟ ಮನಸ್ಸಿಗೆ ಒಂದು ವೈನಾದ ಮದ್ದಿನ ರೂಪದಲ್ಲಿ ಕಂಡು ಬಂದಿತ್ತು.


ಮಿಡ್ಲ್ ಸ್ಕೂಲಿನಲ್ಲಿ ನಮಗೆ ವರ್ಕ್ ಎಕ್ಸಪೀರಿಯನ್ಸ್ (WE) ಎನ್ನುವ ತರಗತಿಗಳು ದಿನಕ್ಕೆ ಒಂದಾದರೂ, ಒಂದು ಪಿರಿಯಡ್ಡಿನಷ್ಟು ವೇಳೆ ಇರುತ್ತಿದ್ದವು. ಕೆಲವೊಮ್ಮೆ ದಿನದ ಎರಡು ಮೂರು ಪಿರಿಯಡ್ಡುಗಳೂ WE ಕ್ಲಾಸುಗಳೇ. ಇಂತಹ ತರಗತಿಗಳ ಉದ್ದೇಶ ನನಗೆ ಇಂದಿಗೂ ಸರಿಯಾಗಿ ಅರ್ಥವಾಗಿಲ್ಲ. ಬೇಸಿಗೆ ಕಾಲದ ನೀಳವಾದ ಹಗಲುಗಳನ್ನು ನೆನಪಿಸುತ್ತಿದ್ದ ಈ ಪಿರಿಯಡ್ಡುಗಳಲ್ಲಿ, ನಮಗೆ ಯಾವ ಪಠ್ಯ ಸಂಬಂಧಿ ವಿಷಯಗಳನ್ನೂ,  ಬೋಧಿಸುತ್ತಿರಲಿಲ್ಲ. ಬದಲಾಗಿ ಚೆನ್ನಾಗಿ ಕಥೆಗಳನ್ನು ಹೇಳಬಲ್ಲಂತಹ ರಾಮಪ್ಪ ಮೇಷ್ಟ್ರು, ಅತ್ಯಂತ ಸ್ವಾರಸ್ಯಕರವಾದ ಕಥೆಗಳಲ್ಲಿ, ನಮ್ಮನ್ನು ಅದ್ದಿ ಅದ್ದಿ, ತೆಗೆಯುತ್ತಿದ್ದರು. ಇನ್ನು ಸಂಗೀತಪ್ರಿಯರಾದ ಹಿಂದಿ ಮೇಡಂ ವಿಮಲಮ್ಮ, ನಮ್ಮಿಂದ ಹಾಡುಗಳನ್ನು ಹೇಳಿಸಿ,  ತಾವೂ ಕೇಳಿ, ಮನಸಾರೆ,  ಆನಂದಿಸುತ್ತಿದ್ದರು. ಸಿನೆಮಾ ಕುರಿತಾದಂತೆ ರಸಪ್ರಶ್ನೆಗಳನ್ನು ಕೇಳುತ್ತಿದ್ದ ವಿಜ್ಞಾನದ ಶಿಕ್ಷಕ ಸತೀಶಪ್ಪ ಮೇಷ್ಟ್ರು,  ನಮ್ಮನ್ನು ಬೇರೊಂದು ಬಣ್ಣಗಳ ಪ್ರಪಂಚಕ್ಕೆ, ಕೈಹಿಡಿದು,  ಕರೆದೊಯ್ಯುತ್ತಿದ್ದರು.


ಅರ್ಧವಾರ್ಷಿಕ ಪರೀಕ್ಷೆಗಳು ಮುಗಿದು,  ದಸರಾ ರಜೆಯೂ ಕಳೆದು ಹೋದ ಮೇಲೆ, ಶಾಲೆ ಪುನರಾರಂಭವಾದ ನಂತರದ ಒಂದು ದಿನ,  ವಿಮಲಮ್ಮ ಮೇಡಂ ನಮಗೆ ಡಬ್ಲ್ಯೂ.ಇ. ಕ್ಲಾಸು ತೆಗೆದುಕೊಂಡರು. ಎಂದಿನಂತೆ,  ವಿದ್ಯಾರ್ಥಿಗಳನ್ನು  ಹಾಡುವುದಕ್ಕೆ ಆಮಂತ್ರಿಸತೊಡಗಿದ ಮೇಡಂ ಕರೆಯುವುದೇ ತಡ, ಆಚಾರಿ ತನ್ನ ಮುಂದಿನ ಬೆಂಚಿನ ಮೊದಲನೆಯ ಸೀಟಿನಿಂದ ಎದ್ದವನು,  ಸೀದಾ ಕಪ್ಪುಹಲಗೆಯ ಸಮೀಪಕ್ಕೆ ಹೋಗಿ ನಮಗೆ ಪ್ರತಿಮುಖವಾಗಿ ನಿಂತುಕೊಂಡ. ತರಗತಿಗೆ ಕಾಲಿಟ್ಟ ಮೊದಲನೇ ದಿನ,  ಹಿಂದಿನ ಬೆಂಚಿನಲ್ಲಿ ಗುಬ್ಬಚ್ಚಿಯಂತೆ ತನ್ನ ದೇಹವನ್ನು ಗೂಡಾಗಿಸಿ ಕುಳಿತಿದ್ದ ಸಿದ್ಧಲಿಂಗ,  ಕೇವಲ ನಾಲ್ಕು ತಿಂಗಳುಗಳ ಅವಧಿಯಲ್ಲಿ,  ತರಗತಿಯ ಮೊದಲನೇ ಸಾಲಿನ ಬೆಂಚಿನಲ್ಲಿ,  ಮೊದಲನೇ ಸೀಟಿನಲ್ಲಿ ವಿರಾಜಮಾನನಾಗ ತೊಡಗಿದ್ದ. ಆತ್ಮವಿಶ್ವಾಸ ಎನ್ನುವುದು ಆತನ ಮುಖದಲ್ಲಿ ಒಡೆದು ತೋರುತ್ತಿತ್ತು. ತರಗತಿಯ "ಅತ್ಯಂತ ಜಾಣ ವಿದ್ಯಾರ್ಥಿ" ಯೆಂದೇ ಗುರುತಿಸಿ ಕೊಂಡಿದ್ದ ಆಚಾರಿಯ ನಡೆನುಡಿಯಲ್ಲಿ,  ಕುರುಡರೂ ಸುಲಭದಲ್ಲಿ ಗುರುತಿಸಬಹುದಾದ,  ಧನಾತ್ಮಕ ಬದಲಾವಣೆಗಳು ಮನೆ ಮಾಡಿದ್ದು, ಎಲ್ಲರ ಕಣ್ಣುಗಳನ್ನು ಕುಕ್ಕತೊಡಗಿದ್ದವು.


ತನ್ನ ಕುರ್ಚಿಯಲ್ಲಿ ಕುಳಿತಿದ್ದ ಮೇಡಂ ಕಡೆಗೆ,  ಒಮ್ಮೆ ದೃಷ್ಟಿ ಹರಿಸಿದ ಸಿದ್ಧಲಿಂಗಾಚಾರಿ,  ಗಂಟಲು ಸರಿಪಡಿಸಿಕೊಂಡವನು "ಕಲ್ಯಾಣದಣ್ಣ, ಅಣ್ಣಾ ಬಾರೋ ಬಸವಣ್ಣಾ" ಎನ್ನುವ ಹಾಡನ್ನು ಸುಶ್ರಾವ್ಯವಾಗಿ ಹಾಡತೊಡಗಿದ್ದ. ಅಲ್ಲಿಯವರೆಗೂ ಸಾಕಷ್ಟು ಚೆನ್ನಾಗಿ ಹಾಡುತ್ತಿದ್ದ, ಶಾಲೆಯ ಮಟ್ಟಿಗೆ ಒಳ್ಳೆ ಶಾರೀರದ ಹಾಡುಗಾರ ಎಂದೇ ಹೆಸರಾದ ನಮ್ಮ ತರಗತಿಯ "ಪಿ.ಬಿ. ಶ್ರೀನಿವಾಸ್" ಖ್ಯಾತಿಯ ಎಂ. ಬಿ. ಹನುಮಂತಪ್ಪನ ದನಿಗೂ, ಆಚಾರಿಯ ದನಿಗೂ ಇದ್ದ ಅಂತರ, ಸಿದ್ಧಲಿಂಗ ಹಾಡಿದ ಪದ್ಯದ ಮೊದಲನೇ ಸಾಲಿನಲ್ಲಿಯೇ, ಎಲ್ಲರಿಗೂ ವೇದ್ಯವಾಗಿತ್ತು. ಸುಮಾರು ಮೂರು ನಿಮಿಷಗಳ ಕಾಲ,  ಅದ್ಭುತವಾಗಿ ಹಾಡಿದ ಆಚಾರಿಯ ಹಾಡಿಗೆ ಇಡೀ ಶಾಲೆ, ಹಾವಾಡಿಗ ಮಂಜಣ್ಣನ ಪುಂಗಿಯ ನಾದಕ್ಕೆ ತಲೆ ತೂಗುತ್ತಿದ್ದ ಕರಿನಾಗರನಂತೆ,  ಮಂತ್ರಮುಗ್ಧವಾಗಿತ್ತು. ಸಿದ್ಧಲಿಂಗ ಹಾಡು ಮುಗಿಸಿದ ತಕ್ಷಣ,  ಆತನನ್ನು ತಬ್ಬಿ ಮುದ್ದಾಡಿದ ವಿಮಲಾ ಮೇಡಂ, ನಮ್ಮ ತರಗತಿಯಲ್ಲಿಯೇ ಇದ್ದ,  ಅವರ ಮಗಳು ಉಷಾಳ ಹೊಟ್ಟೆಯಲ್ಲಿ, ದೊಡ್ಡ ಪ್ರಮಾಣದ ಬೆಂಕಿ ಕೆನ್ನಾಲಿಗೆಗಳನ್ನು ಚಾಚುವಂತೆ, ಮಾಡಿದ್ದರು.


ತಾನು ತರಗತಿಗೆ ಸೇರಿದ ಮೊದಲನೇ ದಿನ ಮಾಡಿದ ಕರಾಮತ್ತನ್ನೇ,  ಮತ್ತೊಮ್ಮೆ ತಾನು ಹಾಡು ಹಾಡಿದ ದಿನ ಮಾಡಿ ತೋರಿಸಿದ್ದ ಸಿದ್ಧಲಿಂಗ. ಅಲ್ಲಿಯವರೆಗೆ ಕೇವಲ ಓದಿನಲ್ಲಿ ಚುರುಕಾಗಿದ್ದಾನೆ ಎಂದು ಭಾವಿಸಿದ್ದ ಆಚಾರಿ, ತನ್ನ ಗಾಯನಕಲೆಯಿಂದಲೂ,  ದಿನ ಕಳೆದು ಬೆಳಗು ಹರಿಯುವುದರಲ್ಲಿ,  ಶಾಲೆಯಲ್ಲಿ ಪ್ರತಿಯೊಬ್ಬರ ಬಾಯಿ ಮಾತಾಗಿ ಹೋಗಿದ್ದ. ಅಲ್ಲಿಯವರೆಗೆ ಹಾಡುಗಳು ಎಂದರೆ ನೆನಪಾಗುತ್ತಿದ್ದ ಹನುಮಂತಪ್ಪನ ಗತಿ,  ಅಂದು ಸಿದ್ಧಲಿಂಗ ಶಾಲಾಪ್ರವೇಶದ ದಿನ ಆದ ನನ್ನ ಪರಿಸ್ಥಿತಿಯನ್ನು, ಎಷ್ಟು ತಡೆಹಿಡಿದರೂ, ನೆನಪು ಮಾಡಿಕೊಡುತ್ತಿತ್ತು.


ಈ ಮೊದಲು ಬಸವಣ್ಣನವರ "ಕಳಬೇಡ, ಕೊಲಬೇಡ" ಎನ್ನುವ ವಚನವನ್ನಷ್ಟೇ ಓದಿದ್ದ ನನ್ನ ಮೇಲೆ,  ಸಿದ್ಧಲಿಂಗ ಹಾಡಿದ ಹಾಡು ಅಗಾಧ ಪರಿಣಾಮವನ್ನು ಉಂಟು ಮಾಡಿತ್ತು. ಬಸವಣ್ಣನವರ ಬಗ್ಗೆ, ಕಲ್ಯಾಣದ ಬಗ್ಗೆ, ಹನ್ನೆರಡನೇ ಶತಮಾನದ ಶರಣರ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕು ಎನ್ನುವ ನನ್ನ ಮನದ ಹಂಬಲವನ್ನು  ಸಿದ್ದಲಿಂಗಾಚಾರಿ, ತನ್ನ ಒಂದು ಹಾಡಿನ ಮೂಲಕ ಇನ್ನಿಲ್ಲದಂತೆ, ಯಾವತ್ತೂ ಬಡಿದೆಬ್ಬಿಸಿದ್ದ.


ಅಲ್ಲಿಂದ ಮುಂದೆ ಯಾವುದೇ ಡಬ್ಲ್ಯೂ.ಇ. ತರಗತಿಗಳಿರಲಿ, ಸಿದ್ಧಲಿಂಗನ ಬಸವಾದಿ ಶರಣರ ಕುರಿತಾದ ಹಾಡುಗಳು ಒಂದು ಹೊಸಾ ಟ್ರೆಂಡನ್ನೇ ನಮ್ಮ ತರಗತಿಯಲ್ಲಿ ಸೃಷ್ಟಿಸ ತೊಡಗಿದವು. ಶಾಲೆಯ ಎಲ್ಲಾ ಸಮಾರಂಭಗಳ ಪ್ರಾರ್ಥನೆಯ ಹೊಣೆ,  ಸಿದ್ಧಲಿಂಗನ ಕೃಶ ಶರೀರ ಮತ್ತು ದೃಢ ಶಾರೀರದ ಮೇಲೆಯೇ ಬೀಳುತ್ತಾ ಹೋಯಿತು. ಶಾಲೆಯಷ್ಟೇ ಏಕೆ?, ಊರಿನ ಯಾವುದೇ ಸಭೆ, ಸಮಾರಂಭವಾದರೂ, ಶಾಸಕರು, ಮಂತ್ರಿಗಣ ಊರಿಗೆ ಭೇಟಿ ಕೊಡುವಾಗಲೂ, ಸ್ವಾತಂತ್ರ್ಯ, ಗಣರಾಜ್ಯೋತ್ಸವದಂತಹ ರಾಷ್ಟ್ರೀಯ ಹಬ್ಬಗಳ ಆಚರಣೆಗಳ ಸಮಯದಲ್ಲಿಯೂ,  ಆಚಾರಿ ಎನ್ನುವ ಬಳ್ಳಾರಿ ಜಾಲಿಯಲ್ಲಿ ವಾಸಿಸುತ್ತಿದ್ದ, "ನೈಂಟಿಗೇಲ್" ಉಲಿಯದೆ ಹೋದರೆ,  ಸಮಾರಂಭಕ್ಕೆ ಕಳೆ ಕಟ್ಟುತ್ತಿರಲಿಲ್ಲ. ತಾನು ನಮ್ಮೂರಿನಲ್ಲಿ ಇದ್ದ ಕೇವಲ ಎರಡು ವರ್ಷಗಳ ಅವಧಿಯಲ್ಲಿ, ಊರಿನಲ್ಲಿ ತನ್ನದೇ ಆದ ರೀತಿಯಲ್ಲಿ,  ಒಂದು ಶರಣ ಸಂಸ್ಕೃತಿಯನ್ನು ಬಿತ್ತುವುದರಲ್ಲಿ, ಸಿದ್ಧಲಿಂಗ, ಬಹಳಷ್ಟು ಮಟ್ಟಿಗೆ, ಯಶಸ್ಸಿನ ಕದ ತಟ್ಟಿದ್ದ.


ಇಡೀ ಜಿಲ್ಲೆಗೇ ಪ್ರಥಮ ಸ್ಥಾನದಲ್ಲಿ ಏಳನೇ ತರಗತಿಯ ಪಬ್ಲಿಕ್ ಪರೀಕ್ಷೆಗಳಲ್ಲಿ ತೇರ್ಗಡೆಯಾದ ಆಚಾರಿ, ತನ್ನ ಮನೆಯ ಕೆಲವೊಂದು ತುರ್ತು ಅಗತ್ಯಗಳಿಗೋಸುಗ, ತನ್ನ ಊರಿಗೇ ಮರಳಿದ. ಆತ ಸಿರುಗುಪ್ಪ ಶಹರದಲ್ಲಿ ಹೈಸ್ಕೂಲು ಸೇರಿದ ಎನ್ನುವ ವಿಷಯವೊಂದನ್ನು ಬಿಟ್ಟರೆ, ಕಳೆದ ನಲ್ವತ್ತು ವರ್ಷಗಳಲ್ಲಿ ಸಿದ್ಧಲಿಂಗನ ಬಗ್ಗೆ ನನಗೆ ಏನೇನೂ ತಿಳಿದಿರಲಿಲ್ಲ.


ಹೋದ ಬೇಸಿಗೆಯಲ್ಲಿ ಊರಿಗೆ ಹೋದವನಿಗೆ ಒಂದು ಆಶ್ಚರ್ಯ ಕಾದಿತ್ತು. ಒಂದನೇ ಇಯತ್ತೆಯಿಂದ ಹಿಡಿದು ಹತ್ತನೇ ತರಗತಿಯವರೆಗೆ ನನ್ನ ಶಾಲೆಯ ಸಹಪಾಠಿಯಾಗಿದ್ದ, ನನ್ನ ಅತ್ಯಾಪ್ತ ಮಿತ್ರವಲಯದಲ್ಲಿ ಗುರುತಿಸಿಕೊಂಡಿದ್ದ,  ಕೋಟೆಗಳವರ ರಾಮಯ್ಯನ ಮಗ ಮಲ್ಲಿ,  "ಪ್ರಕಾಶ, ನಿನ್ಗೆ ಒಂದು ವಿಷ್ಯ ಗೊತ್ತೇನೋ? ನಿನಗೆ ನೆನಪಿದೆಯಾ? ನಾವು ಆರನೇ ತರಗತಿ ಮತ್ತು ಏಳನೇ ತರಗತಿಯಲ್ಲಿ ಓದುತ್ತಿದ್ದಾಗ, ಸಿದ್ಧಲಿಂಗ ಆಚಾರಿ ಎನ್ನುವ ಬಳ್ಳಾರಿ ಕಡೆಯ ಹುಡುಗ ಒಬ್ಬ ಹುಡುಗನಿದ್ದ ನೋಡು" ಎಂದು ಮಾತಿಗೆ ಮೊದಲಿಟ್ಟವನು, "ಅವನು ಕಳೆದ ಆರು ತಿಂಗಳಿನಿಂದ ನಮ್ಮೂರಿನಲ್ಲಿಯೇ ಠಿಕಾಣಿ ಹೂಡಿದ್ದಾನೆ. ಮಾರಣಾಂತಿಕವಾದ ಕ್ಯಾನ್ಸರ್ ರೋಗದಿಂದ ನರಳುತ್ತಿದ್ದಾನೆ. ಆತನನ್ನು ನೋಡಿಕೊಳ್ಳಲು, ಅವನ ಊರಿನಲ್ಲಿ ಯಾವ ಸಂಬಂಧಿಗಳೂ ಇಲ್ಲದೇ ಹೋದ ಕಾರಣ, ನಮ್ಮೂರಿನ ತನ್ನ ತಾತನ ಮನೆಯಲ್ಲಿ ಇದ್ದಾನೆ. ತುಂಬಾ ಸವೆದು ಹೋಗಿದ್ದಾನೆ ಕಣೋ. ಬಹಳ ದಿನ ಬದುಕಲಾರ  ಎಂದು ದುರ್ಗದ ದೊಡ್ಡ ಡಾಕ್ಟರ್ ಹೊನ್ನೂರೆಡ್ಡಿ ಹೇಳಿದ್ದಾರಂತೆ" ಎಂದ. 


ಮಲ್ಲಿಯ ಮಾತುಗಳನ್ನು ಕೇಳುತ್ತಿದ್ದ ಹಾಗೆ, ನನಗೆ ನಿಂತಲ್ಲಿಯೇ ಕುಸಿದು ಬೀಳುವ ಅನುಭವವಾಗ ತೊಡಗಿತು. ಸಿದ್ಧಲಿಂಗನನ್ನು ನನ್ನ ಜೀವನದಲ್ಲಿ ನಾನು ಮರೆಯುವ ಹಾಗೆಯೇ ಇರಲಿಲ್ಲ. ನನ್ನ ಅಹಂಗೆ ಬಹಳ ದೊಡ್ಡದಾದ ಪೆಟ್ಟನ್ನು, ಎಳೆಯ ಗಿಡವಾಗಿದ್ದ ಸಮಯದಲ್ಲಿಯೇ ಕೊಟ್ಟು, ನನ್ನ ಜೀವನದ ದೆಸೆಯನ್ನೇ ಅಮೂಲಾಗ್ರವಾಗಿ ಬದಲಿಸಿದ, ಜನ್ಮ ಜನ್ಮಾಂತರದ ಅಪೂರ್ವ ಗೆಳೆಯ ಆತ. ಬಸವಾದಿ ಶರಣರನ್ನು ನನಗೆ, ತನ್ನ ಹಾಡುಗಳ ಮೂಲಕ ಪರಿಚಯ ಮಾಡಿಕೊಟ್ಟು,  ಶರಣರ ಲೋಕಕ್ಕೆ ನನ್ನನ್ನು ಕೈಹಿಡಿದು ಕರೆದೊಯ್ದ ಮಹಾಮಹಿಮನಾತ. ಅವನನ್ನು ಈ ಜೀವನದಲ್ಲಿ ನಾನು ಎಂದಾದರೂ ಮರೆಯುವುದು ಶಕ್ಯವೇ?


"ಮಲ್ಲಿ, ನಡಿಯೋ ಈಗಲೇ ಹೋಗಿ, ಸಿದ್ಧಲಿಂಗನನ್ನು ನೋಡಿಕೊಂಡು ಬರೋಣ" ಎನ್ನುವ ನನ್ನ ಅಗ್ರಹಪೂರಿತ ಮಾತಿಗೆ,  ಮತ್ತೇನನ್ನೂ ನುಡಿಯಲಾರದಾದ ಗೆಳೆಯನೊಂದಿಗೆ,  ಸುಮಾರು ಹದಿನೈದು,  ಇಪ್ಪತ್ತು ನಿಮಿಷಗಳ ಬಿರುಸಾದ ನಡೆಯ ನಂತರದಲ್ಲಿದ್ದ,  ಸಿದ್ಧಲಿಂಗನ ಮನೆ ಸೇರಿದೆವು. ಹಜಾರದಲ್ಲಿ, ಒಬ್ಬನೇ ಹಾಸಿಗೆಯಲ್ಲಿ ಅಂಗಲಾತವಾಗಿ ಮಲಗಿ,  ಜೀರ್ಣಾವಸ್ಥೆಯ ಹಂತದಲ್ಲಿದ್ದ ಮಾಡಿನ ಜಂತೆಗಳನ್ನು, ನಿರ್ಜೀವ ಕಣ್ಣುಗಳಿಂದ ತುಂಬಿಕೊಳ್ಳುತ್ತಿದ್ದ ಆಚಾರಿಯನ್ನು "ಸಿದ್ದಲಿಂಗಾ, ಸಿದ್ಧಲಿಂಗಾ" ಎನ್ನುವ ಬಾಲ್ಯದ ಆಪ್ಯಾಯಮಾನದೊಂದಿಗೇ ಕೂಗಿ ಕರೆಯತೊಡಗಿದೆ. ನನ್ನ ದನಿಯನ್ನು ಕೇಳಿ,  ನಿಧಾನವಾಗಿ ಮಗ್ಗುಲು ಬದಲಿಸಿದ ಗೆಳೆಯ, "ನೀವು ಯಾರು?" ಎನ್ನುವ ಕ್ಷೀಣ ದ್ವನಿಯಲ್ಲಿ ನನ್ನನ್ನು ಪ್ರಶ್ನಿಸಿದ. "ನಾನು ಕಣೋ ಪ್ರಕಾಶ, ಶಿವಪ್ರಕಾಶ, ಎನ್.ಸಿ. ಶಿವಪ್ರಕಾಶ, ಮಿಡ್ಲ್ ಸ್ಕೂಲಿನ ಆರು ಮತ್ತು ಏಳನೇ ತರಗತಿಗಳಲ್ಲಿ ನಿನ್ನ ಕ್ಲಾಸ್ ಮೇಟ್ ಆಗಿದ್ದವನು" ಎಂದು ಪರಿಚಯ ಮಾಡಿಕೊಂಡೆ. ನಿತ್ರಾಣ ಸ್ಥಿತಿಯಲ್ಲಿದ್ದ ಸಿದ್ಧಲಿಂಗನ ರಕ್ತಾಹೀನ ಕಣ್ಣುಗಳು, ಮೊರದಷ್ಟು ಅಗಲ ಅರಳಿಕೊಂಡವು. ತನ್ನ ದೇಹದ ಶಕ್ತಿಯನ್ನೆಲ್ಲ ಒಂದುಗೂಡಿಸಿ, ಕಷ್ಟಪಟ್ಟು, ಹಾಗೋ, ಹೀಗೋ, ಹಾಸಿಗೆಯ ಮೇಲೆ ಕುಳಿತುಕೊಳ್ಳುವುದರಲ್ಲಿ ಯಶಸ್ವಿಯಾದ ಸ್ನೇಹಿತನ ಸಡಗರ ನೋಡಿಯೇ ತಿಳಿಯಬೇಕಿತ್ತು. ನನ್ನ ಕೈಗಳನ್ನು ಹಿಡಿದು ಸವರುತ್ತಾ, ಅತ್ಯಂತ ಆತ್ಮೀಯತೆಯಿಂದ ಮಾತನಾಡುತ್ತಲೇ  ಸಾಗಿದ ಸಿದ್ಧಲಿಂಗನನ್ನು,  "ಅಪ್ಪ, ಸಾಕಪ್ಪಾ, ಜಾಸ್ತಿ ಸುಸ್ತು ಮಾಡಿಕೊಳ್ಳಬೇಡಿ, ಇನ್ನು ಮಲಗಿ" ಎಂದು, ಆಳೆತ್ತರಕ್ಕೆ ಬೆಳೆದು ನಿಂತಿದ್ದ,  ಆತನ ಮಗಳು ಬಂದು ಎಚ್ಚರಿಸಬೇಕಾಯಿತು. "ಅಮ್ಮಾ ಅಂಕಲ್ ಬಂದಿದ್ದಾರೆ, ನೋಡಮ್ಮಾ. ನನ್ನ ಬಾಲ್ಯದ ಗೆಳೆಯ ಕಣಮ್ಮಾ, ಸ್ವಲ್ಪ ಕಾಫಿ ತಂದುಕೊಡು" ಎಂದು ಮಗಳನ್ನು ವಿನಂತಿಸಿಕೊಂಡ ಸಿದ್ಧಲಿಂಗ, ಮತ್ತೆ ನನ್ನ ಕಡೆಗೆ ತಿರುಗಿ ಮೆಲುದನಿಯಲ್ಲಿ, ತನ್ನ ಮಾತುಗಳನ್ನು,  ಮುಂದುವರೆಸಿದ. 


ಸಿದ್ಧಲಿಂಗನ ಪರಿಸ್ಥಿತಿ ನೋಡಿ ನನ್ನ ಕಣ್ಣಾಲಿಗಳು ತುಂಬಿ ಬಂದವು. ಗೆಳೆಯ ಮಲ್ಲಿಯ ಕಣ್ಣುಗಳೂ ತೇವದಿಂದ ಒದ್ದೆಯಾಗತೊಡಗಿದವು. ಆಚಾರಿಯ ಮಗಳು ತಂದು ಕೊಟ್ಟ ಕಾಫಿಯನ್ನು, ಒಲ್ಲದ ಮನಸ್ಸಿನಲ್ಲಿ ಹೀರಿದ ನಾನು, ಕಣ್ಣುಗಳನ್ನು ಒರೆಸಿ ಕೊಳ್ಳುತ್ತಲೇ,  "ಸಿದ್ದಲಿಂಗಾ, ನನಗಾಗಿ ದಯವಿಟ್ಟು ಒಂದು ಕೆಲಸ ಮಾಡುತ್ತೀಯೇನೋ?" ಎಂದು ಅರ್ತಸ್ವರದಲ್ಲಿ ಆತನನ್ನು ಬೇಡಿಕೊಂಡೆ. ಆತ, ತನ್ನ ಗೋಣನ್ನು ನಿಧಾನಗತಿಯಲ್ಲಿ ಹಾಕುವ ಮೂಲಕ ಸಮ್ಮತಿ ಸೂಚಿಸಿದ ನಂತರ, ಅವನ ಮಗಳು ಸಮೀಪದಲ್ಲಿ ಎಲ್ಲೂ ಇಲ್ಲ ಎನ್ನುವುದನ್ನು ಖಾತ್ರಿ ಮಾಡಿಕೊಂಡವನು, "ದಯವಿಟ್ಟು ನೀನು ತರಗತಿಯಲ್ಲಿ ಹಾಡುತ್ತಿದ್ದ ಕಲ್ಯಾಣದಣ್ಣ, ಅಣ್ಣಾ ಬಾರೋ ಬಸವಣ್ಣಾ ಹಾಡನ್ನು ಒಮ್ಮೆ ಹಾಡುತ್ತೀಯೇನೋ?" ಎನ್ನುತ್ತಾ ಗದ್ಗದಿತನಾದೆ. ನನ್ನ ಮಾತನ್ನು ಕೇಳಿ, ತನ್ನ ಯಮಯಾತನೆ ತುಂಬಿದ ಕಣ್ಣುಗಳಲ್ಲಿ, ನನ್ನನ್ನು ಒಂದು ಕ್ಷಣಕಾಲ ನೋಡಿದ ಆಚಾರಿ,  ಸಣ್ಣನೆಯ ದನಿಯಲ್ಲಿ ಹಾಡನ್ನು ಹಾಡಲು ಶುರು ಹಚ್ಚಿಕೊಂಡೇ ಬಿಟ್ಟ. ಆತನ ಕಂಠ ಈ ಮುಂಚಿನಂತೆ ಇಲ್ಲದೇ ಹೋದರೂ, ಅಂದೇಕೋ ಆತ ಹಾಡಿದ ಹಾಡು,  ಆತನ ಬಾಯಿಯಿಂದ ನಾನು ನೂರಾರು ಸಲ ಕೇಳಿದ ಅದೇ ಹಾಡಿನ ಗಾಯನವನ್ನು ಮೀರಿಸಿದಂತೆ ಇತ್ತು ಎನ್ನುವುದನ್ನು,  ನನ್ನೊಂದಿಗಿದ್ದ ಮಲ್ಲಿಯೂ ಒಪ್ಪಿದ್ದ. ಆಚಾರಿಯ ಕೈಯಲ್ಲಿ ಹಣ ತುಂಬಿದ ಒಂದು ಲಕೋಟೆಯನ್ನು, ಆತನ ಪರಮ ವಿರೋಧದ ನಂತರವೂ ತುರುಕಿ,  ಆತನಿಂದ ಬೀಳ್ಕೊಟ್ಟ ನನ್ನ ಮನವೇಕೋ,  ಸ್ನೇಹಿತನ ಅತ್ಯಂತ ದಾರುಣವಾದ ಸ್ಥಿತಿಯನ್ನು ನೋಡಿದ ನಂತರವೂ, ಹಕ್ಕಿಯಂತೆ ಹಗುರಾಗಿ ಶರಣಾಗಸದಲ್ಲಿ ತೇಲ ತೊಡಗಿದ ಅನುಭೂತಿಗೆ ಪಾತ್ರವಾಗಿತ್ತು.


ಸಿದ್ಧಲಿಂಗನನ್ನು ಭೇಟಿಯಾದ ತದನಂತರದ ಹತ್ತು ದಿನಗಳಲ್ಲಿ, ಮಸ್ಕತ್ ಸೇರಿ ನನ್ನ ಎಂದಿನ ಕೆಲಸ ಕಾರ್ಯಗಳ ಒತ್ತಡದಲ್ಲಿ,  ಸಿದ್ಧಲಿಂಗ ಆಚಾರಿಯನ್ನು ಸಂಪೂರ್ಣವಾಗಿ ಮರೆತೇ ಬಿಟ್ಟಿದ್ದೆ. ನಾನು ಊರಿಗೆ ವಾಪಸಾದ ಸುಮಾರು ಎರಡು ತಿಂಗಳುಗಳ ನಂತರ, ಒಂದು ಸಂಜೆಯ ಸುಮಾರು ಆರು ಗಂಟೆಯ ವೇಳೆಗೆ,  ಮಲ್ಲಿ ನನಗೆ ಫೋನಾಯಿಸಿದ್ದ. "ಪ್ರಕಾಶ ಇವತ್ತು ಸಿದ್ಧಲಿಂಗ ಆಚಾರಿ ತೀರಿಕೊಂಡ ಕಣೋ. ಆತನ ಮಣ್ಣಿಗೆ ಹೋಗಿ,  ಈಗ ತಾನೇ ವಾಪಾಸು ಬರುತ್ತಿದ್ದೇನೆ. ವಿಷಯ ನಿನಗೆ ತಿಳಿದಿರಲಿ ಎನ್ನುವ ಕಾರಣಕ್ಕೆ ಹೇಳುತ್ತಿದ್ದೇನೆ" ಎಂದವನು "ಹಾಂ, ಅಂದ ಹಾಗೆ ಮತ್ತೊಂದು ವಿಷ್ಯ ಕಣೋ. ನೀನು ಊರಿಗೆ ಬಂದಾಗ, ನಾವು ಹೋಗಿ ಆತನನ್ನು ಭೇಟಿ ಮಾಡಿ ಬಂದಿದ್ದೆವಲ್ಲವೋ? ನೀನು ಆತನಿಗೆ ಹಣವನ್ನೂ ಕೊಟ್ಟಿದ್ದೆ. ಅದು ಹೆಚ್ಚಿನ ಮೊತ್ತದ್ದಾದ ಕಾರಣ, ಅದನ್ನು ಸಿದ್ಧಲಿಂಗ ತನ್ನ ಚಿಕಿತ್ಸೆಗೆ ಬಳಸದೆ, ನಮ್ಮೂರಿನಲ್ಲಿ ಒಂದು ಸಣ್ಣಮಟ್ಟದ ವಚನಗಾಯನ ಕಲಿಯುವಿಕೆಯ ಒಂದು ಪಾಠಶಾಲೆಯನ್ನು ಪ್ರಾರಂಭಿಸಲು ತನ್ನ ಮಗಳನ್ನು  ಒಪ್ಪಿಸಿದ್ದಾನಂತೆ. ಆಚಾರಿಯ ಮಗಳು,  ನಮ್ಮೂರ ಹೈಸ್ಕೂಲಿನಲ್ಲಿ, ಸಂಗೀತದ ಮೇಸ್ಟ್ರಂತೆ ಕಣೋ. ತಂದೆಯ ಹೆಸರಿನಲ್ಲಿ ಈ ತಿಂಗಳು,  ಸಿದ್ಧಲಿಂಗನ ಅಂತಿಮ ಕಾರ್ಯಗಳು ಮುಗಿದಾದ ಮೇಲೆ, ಶರಣರ ವಚನಗಳ ಗಾಯನದ ಶಾಲೆಯನ್ನು ಸಣ್ಣಮಟ್ಟದಲ್ಲಿ ಶುರು ಮಾಡುತ್ತಾಳಂತೆ" ಎನ್ನುತ್ತಾ, ಹೀಗೆಯೇ ಏನನ್ನೋ ಹೇಳುತ್ತಲೇ ಹೋಗುತ್ತಿದ್ದ. ಇಷ್ಟು ಮಾತ್ರ ಕೇಳಿಸಿಕೊಂಡ ನನಗೆ, ಆತ ಹೇಳಿದ ಬೇರೆ ಎಲ್ಲಾ ಮಾತುಗಳೂ, ಆ ಕ್ಷಣದಲ್ಲಿ,  ಅಪ್ರಾಸಂಗಿಕವಾಗಿ, ತೋರಿ ಬಂದವು. ಮನೆಯ ಹಜಾರದಲ್ಲಿದ್ದ ಬಸವನ ಫೋಟೋ ಮುಂದೆ ಹೋಗಿ ಕೈಮುಗಿದು ನಿಂತುಕೊಂಡೆ, ಹಿನ್ನೆಲೆಯಲ್ಲಿ "ಕಲ್ಯಾಣದಣ್ಣ, ಅಣ್ಣಾ ಬಾರೋ ಬಸವಣ್ಣಾ" ಎಂದು ಸಿದ್ಧಲಿಂಗ, ಕೊನೆಯ ಬಾರಿಗೆ ಎನ್ನುವಂತೆ,  ಹಾಡತೊಡಗಿದ್ದ. ಸರಿರಾತ್ರಿಯವರೆಗೂ ನನಗಾಗಿ ಹಾಡುತ್ತಲೇ ಸಾಗಿದ್ದ ಗೆಳೆಯನ ಅಂತಿಮ ಹಾಡು ಮುಗಿಯುವ ಮುನ್ನವೇ,  ನಾನು ನಿದ್ರಾದೇವಿಯ ಮಡಿಲು ಸೇರಿದ್ದೆ.


ಎನ್.ಸಿ. ಶಿವಪ್ರಕಾಶ್

ಮಸ್ಕತ್, ಒಮಾನ್

Comments